Marriage Harassment : ಗಂಡನ ಕಿರುಕುಳಕ್ಕೆ ಮಹಿಳಾ ಸಂಘಟನೆ ಮೊರೆ ಹೋದಾಕೆಗೆ ಶಾಕ್! ಸಂದಾನಕ್ಕೆ ಬಂದವಳು ಸಂಗಾತಿಯಾದ್ಳು!

ಬದುಕಿನ ಸಮಸ್ಯೆಗಳಿಗೆ ಪರಿಹಾರ ಎಂಬುದು ಇದ್ದೇ ಇರುತ್ತದೆ. ಅವುಗಳನ್ನು ಹುಡುಕಿ ಆ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕಷ್ಟೆ. ಆದರೆ ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗಬೇಕಾದ ದಾರಿಗಳೇ ಮುಳುವಾಗಿ ಪರಿಣಮಿಸುತ್ತವೆ. ಅಂತೆಯೇ ಇದೀಗ ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗಿದೆ.

ಮಹಿಳೆಯರ ಕಷ್ಟಗಳನ್ನು ಆಲಿಸಿ, ಅವರಿಗೆ ಸೂಕ್ತ ಪರಿಹಾರಗಳನ್ನು ಹುಡುಕಿಕೊಡುವ, ತೊಂದರೆಯಿಂದ ಬಚಾವ್ ಮಾಡಿಸುವ ಮಹಿಳಾ ಸಂಘಟನೆಯೇ ಇಲ್ಲೊಬ್ಬಳು ಮಹಿಳೆಗೆ ಉರುಳಾಗಿ ಪರಿಣಮಿಸಿದೆ. ಹಾಗಿದ್ರೆ ಏನಿದು ಪ್ರಕರಣ. ನೀವೆ ನೋಡಿ. ಸರ್ಕಾರಿ ನೌಕರಿಯಲ್ಲಿರುವ ಆತ ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದುತ್ತಾನೆ. ತನಗೆ ಮದುವೆಯಾಗಿ 23 ವರ್ಷಗಳು ಕಳೆದು ಸದ್ಯ ಆತನ ಮಕ್ಕಳೂ ಮದುವೆ ವಯಸ್ಸಿಗೆ ಬಂದು ನಿಂತಿದ್ದಾರೆ. ಆದರೆ ಈ ಭೂಪ ತನ್ನ ಹೆಂಡತಿಗೆ ಕಿರುಕುಳ ಕೊಡೋದನ್ನು ನಿಲ್ಲಿಸಿಲ್ಲ. ಇದರೊಂದಿಗೆ ಇಳಿ ವಯಸ್ಸಿನಲ್ಲೂ ಹೊಸ ಸಂಗಾತಿ ಪಡೆಯುವ ಆಸೆ!

ಬೆಳಗಾವಿ ಯ ಹನುಮಾನ್ ನಗರದ ನಿವಾಸಿ ತಬ್ಸುಮ್, ಕಳೆದ 23 ವರ್ಷದ ಹಿಂದೆ ಕೇಂದ್ರಿಯ ಅಬಕಾರಿ ಮತ್ತು ಕಸ್ಟಮ್ಸ್ ಆಯುಕ್ತರ ಕಚೇರಿಯಲ್ಲಿ ಇನ್ಸ್‌ ಪೆಕ್ಟರ್ ಆಗಿರುವ ಬೆಳಗಾವಿಯ ಮೊಹಮ್ಮದ್ ಆಸೀಫ್ ಇನಾಮದಾರ ಎಂಬಾತನನ್ನ ಮದುವೆ ಆಗಿದ್ದರು. ಈ ದಂಪತಿಗೆ ಮದುವೆ ವಯಸ್ಸಿಗೆ ಬಂದ ಮೂವರು ಗಂಡು ಮಕ್ಕಳಿದ್ದಾರೆ. ಆದರೆ ಮಕ್ಕಳು ಮದುವೆ ವಯಸ್ಸಿಗೆ ಬಂದ್ರೂ ಹೆಂಡತಿ ಜೊತೆಗೆ ಜಗಳ ಮಾಡುವುದನ್ನ ಆಸೀಫ್ ಬಿಟ್ಟಿರಲಿಲ್ಲ. ಪತ್ನಿಗೆ ನಿರಂತರವಾಗಿ ಕಿರುಕುಳ ಕೊಡ್ತಾನೆ ಇದ್ದ.‌

ಮದುವೆಯಾದ ದಿನದಿಂದಲೂ ಈತನ ಕಿರುಕುಳ ಸಹಿಸಿಕೊಂಡಿದ್ದ ಪತ್ನಿ ಕೊನೆಗೂ ಕಾಟ ತಾಳಲಾರದೇ ಮಹಿಳಾ ಸಂಘಟನೆಗೆ ಹೋಗಿ ನ್ಯಾಯ ಕೇಳಿದ್ದಾಳೆ. ತನ್ನ ಗಂಡ ನೀಡುವ ಹಿಂಸೆಯನ್ನು ವಿವರಿಸಿ, ಆತನಿಗೆ ವಾರ್ನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೀಗ ಸಮಸ್ಯೆ ಬಗೆಹರಿಸಿ, ನ್ಯಾಯ ಕೊಡಿಸುವುದಾಗಿ ಹೇಳಿದ್ದ ಮಹಿಳೆಯೇ, ದೂರು ನೀಡಿದಾಕೆಗೆ ದೊಡ್ಡ ಶಾಕ್ ನೀಡಿದ್ದಾಳೆ.

ಹೌದು, ಪತಿ ಕಿರುಕುಳ ತಾಳಲಾರದೇ ತಬ್ಸುಮ್ ಮಹಿಳಾ ಸಂಘಟನೆಯ ನಾಯಕಿ ಸೀಮಾ ಇನಾಮದಾರ್ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಹೀಗಾಗಿ ಆಸೀಫ್ ನಂಬರ್ ಪಡೆದ ಸೀಮಾ ಮೊದಲು ಆತನಿಗೆ ಬೆದರಿಕೆ ಹಾಕಿದ್ದು, ಬಳಿಕ ಆತನೊಂದಿಗೆ ಸಲುಗೆಯಿಂದ ಮಾತಾಡಿ ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಾಳೆ. ಸಾಲದ್ದು ಅಂತ ಒಂದು ವಾರದ ಹಿಂದಷ್ಟೇ ಹೆಂಡತಿ ತಬ್ಸುಮ್‍ಗೆ ಗೊತ್ತಿಲ್ಲದಂತೆ ಆಸೀಫ್‍ನನ್ನ ಮದುವೆಯಾಗುವ ಮೂಲಕ ನಂಬಿದವರ ಕುತ್ತಿಗೆ ಕುಯ್ದಿದ್ದಾಳೆ. ಇದಾದ ನಾಲ್ಕು ದಿನದ ನಂತರ ಆಸೀಫ್ ತನ್ನ ಮಗನಿಗೆ ನಾನು ಮದುವೆಯಾಗಿದ್ದೇನೆ ಅಂತಾ ಫೋಟೋ ಕಳಿಸಿದ್ದಾನೆ. ಈ ವಿಚಾರ ತಬ್ಸುಮ್‍ಗೆ ಗೊತ್ತಾಗಿ ಗಂಡನಿಗೆ ಫೋನ್ ಮಾಡಿ ಬೈಯ್ದಿದ್ದಾಳೆ. ಬಳಿಕ ಮನೆಗೆ ಬಂದ ಆಸೀಫ್ ಹೆಂಡತಿ ತಬ್ಸುಮ್ ಮೇಲೆ ಹಲ್ಲೆ ಮಾಡಿ ಬ್ಲೇಡ್‍ನಿಂದ ಗಾಯ ಮಾಡಿ ಹೋಗಿದ್ದಾನೆ.

ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬ್ಸುಮ್ ತನ್ನ ಪರಿಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದಾಳೆ. ನ್ಯಾಯಕೊಡಿಸ್ತೀನಿ ಅಂತ ಹೇಳಿ ಅನ್ಯಾಯ ಮಾಡಿದ ಸೀಮಾ ವಿರುದ್ಧ ಆಕ್ರೋಶ ಹೊರ ಹಾಕ್ತಾ ಇಬ್ಬರಿಗೂ ತಕ್ಕ ಶಾಸ್ತಿ ಆಗಬೇಕು ಅಂತಾ ಒತ್ತಾಯಿಸಿದ್ದಾಳೆ. ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‍ನಲ್ಲಿದ್ದ ಆಸೀಫ್ ಹಾಗೂ ಸೀಮಾರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಗಂಡನನ್ನು ಸರಿ ದಾರಿಗೆ ತರಲು ಮಹಿಳಾ ಸಂಘಟನೆ ಬಳಿ ಹೋದ ಮಹಿಳೆಗೆ ದಾರಿಯೇ ಸಂಪೂರ್ಣ ಕತ್ತಲಾಗಿದೆ. ಒಟ್ಟಿನಲ್ಲಿ ಬೆಲಿಯೇ ಎದ್ದು ಹೊಲ ಮೆಯ್ದಂತಾಗಿದೆ.

Leave A Reply

Your email address will not be published.