ಈ ಕಂಪೆನಿಯಲ್ಲಿ, ರಜೆಯಲ್ಲಿರುವ ಉದ್ಯೋಗಿಗಳಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ! ಮಾಡಿದ್ರೆ ಬೀಳುತ್ತೆ 1 ಲಕ್ಷದಷ್ಟು ದಂಡ!
ಸಾಮಾನ್ಯವಾಗಿ ಯಾರಿಗಾದ್ರೂ ಒಂದು ಫೋನ್ ಕರೆ ಮಾಡಬೇಕೆಂದ್ರ ನಮಗೆ ತಗಲುವ ವೆಚ್ಚ ತುಂಬಾ ಕಡಿಮೆ. ಅದರಲ್ಲೂ ಈಗಂತೂ ಕರೆಗಳು ನಮಗೆ ಉಚಿತವಾಗಿಯೇ ಸಿಗುತ್ತಿದೆ. ಆದರೆ ಇಲ್ಲಂದುಕಡೆ, ನೀವೆನಾದರೂ ಮೈಮರೆತು ಒಂದೇ ಒಂದು ಕರೆ ಮಾಡಿದರೆ ಒಂದು ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ ಅಂದರೆ ನೀವು ನಂಬುತ್ತೀರಾ? ಅಯ್ಯೋ ಇದ್ಯಾವುದಪ್ಪಾ ಹೊಸ ರಗಳೆ ಅಂತ ಅನ್ಕೊಳ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.
ಹೌದು, ಇಲ್ಲೊಂದು ಕಂಪನಿ, ತನ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಹಿತ ದೃಷ್ಟಿಯಿಂದ ಈ ನಿರ್ಧಾರ ತಗೆದುಕೊಂಡಿದೆ. ಮುಂಬೈ ಮೂಲದ ಒಂದು ಸ್ಟಾರ್ಟಪ್ ಕಂಪನಿಯಾದ ‘ಡ್ರೀಮ್ ಸ್ಪೋರ್ಟ್ಸ್’ ಕಂಪೆನಿಯು ರಜೆಯಲ್ಲಿರುವ ತನ್ನ ಉದ್ಯೋಗಿಗಳಿಗೆ ಸಹದ್ಯೋಗಿಗಳು ಕಚೇರಿಯ ವಿಷಯವಾಗಿ ಏನಾದರೂ ಕರೆ ಮಾಡಿದರೆ ಅವರಿಗೆ ಒಂದು ಲಕ್ಷ ದಂಡ ವಿಧಿಸಲು ನಿರ್ಧರಿಸಿದೆ.
ಕಂಪೆನಿಯಲ್ಲಿ ರಜೆ ಪಡೆದು ಮನೆಯಲ್ಲೋ ಅಥವಾ ಹೊರಗಡೆಯೋ ಇದ್ದಾಗ, ಅದೇ ಕಂಪನಿಯಿಂದ ಕರೆ ಬಂದರೆ ಎಂತಾ ಕಿರಿಕಿರಿ ಅಲ್ವಾ? ರಜೆಯಲ್ಲೂ ಬಿಡುವುದಿಲ್ಲವೇ? ಎಂದು ಸಿಟ್ಟು ಬರುವುದು ಸಹಜ.
ಇದರಿಂದಾಗಿ ರಜೆಯ ನಂತರ ಅವರ ಫರ್ಪಾರ್ಮೆನ್ಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪರಿಣಾಮವಾಗಿ ಆ ಕಂಪನಿಯ ಉತ್ಪಾದಕತೆ ಕಡಿಮೆಯಾಗುವ ಸಾಧ್ಯತೆಯಿದೆ. ನಿಖರವಾಗಿ ಈ ಅಂಶವನ್ನು ಆಧರಿಸಿ ಮುಂಬೈ ಮೂಲದ ಡ್ರೀಮ್ ಸ್ಪೋರ್ಟ್ಸ್ ಕಂಪನಿ ವಿನೂತನ ನಿರ್ಧಾರವನ್ನು ತೆಗೆದುಕೊಂಡಿದೆ. ಉದ್ಯೋಗಿ ರಜೆಯಲ್ಲಿರುವಾಗ ಸಹೋದ್ಯೋಗಿಗಳು ಕೆಲಸಕ್ಕೆ ಅಡ್ಡಿಪಡಿಸಬಾರದು ಮತ್ತು ಒಂದು ವೇಳೆ ಹಾಗೆ ಮಾಡಿದವರೂ 1 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಬೆಟ್ಟಿಂಗ್ ಫ್ಲಾಟ್ಫಾರ್ಮ್ ಡ್ರೀಮ್ 11 ಗೇಮ್ ನಿರ್ವಹಿಸುತ್ತಿರುವ ಸಂಸ್ಥೆಯೇ ಈ ಡ್ರೀಮ್ ಸ್ಪೋರ್ಟ್ಸ್. ಕಂಪನಿಯೂ ವರ್ಷಕ್ಕೊಮ್ಮೆ ಒಂದು ವಾರ ರಜೆ ನೀಡುತ್ತದೆ. ಈ ರಜೆ ದಿನಗಳಲ್ಲಿ ಉದ್ಯೋಗಿಗೆ ಕಂಪನಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಆಲೋಚಿಸುವ ಅಗತ್ಯ ಇರುವುದಿಲ್ಲ. ತಮಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುವುದಕ್ಕೆ ಸ್ವಾತಂತ್ರ್ಯವನ್ನು ನೀಡಲಾಗಿರುತ್ತದೆ. ಈ ಸಮಯದಲ್ಲಿ, ಸಹೋದ್ಯೋಗಿಗಳು ವೃತ್ತಿಪರ ಉದ್ದೇಶಗಳಿಗಾಗಿ ಉದ್ಯೋಗಿಗಿ ಕರೆದರೆ, ಅದು ಅವರ ಸ್ವಾತಂತ್ರ್ಯ ಹರಣ ಮಾಡಿದಂತಾಗುತ್ತದೆ ಎಂದು ಡ್ರೀಮ್ ಸ್ಪೋರ್ಟ್ಸ್ ಭಾವಿಸುತ್ತಿದೆ.
ಉದ್ಯೋಗಿಗಳ ರಜೆಯ ಮೂಡ್ಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಡ್ರೀಮ್ ಸ್ಪೋರ್ಟ್ಸ್ ಸಂಸ್ಥೆ ಈ ನಿಯಮವನ್ನು ಜಾರಿಗೆ ತಂದಿದೆ ಎಂದು ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಹರ್ಷ ಜೈನ್ ಹೇಳಿದ್ದಾರೆ. ಉದ್ಯೋಗಿಗಳು ವರ್ಷಕ್ಕೊಮ್ಮೆ ಒಂದು ವಾರದವರೆಗೆ ವೃತ್ತಿಪರ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾರೆ. ಈ ಸಮಯದಲ್ಲಿ ಉದ್ಯೋಗಿಗೆ ಫೋನ್ಗಳು, ಇಮೇಲ್ಗಳು ಮತ್ತು ಸ್ಲ್ಯಾಕ್ಸ್ಗಳ ರೂಪದಲ್ಲಿ ಯಾವುದೇ ಅಡಚಣೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಯೋಜನೆಯನ್ನು ಜಾರಿಗೆ ತರುವುದರಿಂದ ಸಂಸ್ಥೆಗೆ ಎರಡು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಉದ್ಯೋಗಿಗಳ ರಜೆಯನ್ನು ಗೌರವಿಸುವುದರ ಜೊತೆಗೆ ಕಂಪನಿಯ ಸ್ಥಿತಿಗತಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಕಂಪನಿಯು ಯಾವ ಉದ್ಯೋಗಿಗಳ ಯಾವ ರೀತಿ ಅವಲಂಬಿತವಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ರಜಾದಿನಗಳಲ್ಲಿ ಉದ್ಯೋಗಿ ರಿಫ್ರೆಶ್ ಆದ ನಂತರ ಕಚೇರಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು ಎಂಬುದು ಜೈನ್ ಹಾಗೂ ಸಂಸ್ಥೆಯ ಸಿಇಒ ಭವಿತ್ ಸೇಠ್ ವಾದವಾಗಿದೆ.