ಹೆಂಡತಿಯ ಜನ್ಮದಿನ ಮರೆತ್ರೆ ಈ ದೇಶದಲ್ಲಿ ಗಂಡನಿಗೆ ಬೀಳುತ್ತೆ ದಂಡ, ಕೊನೆಗೆ ಜೈಲೇ ಗತಿ! ಈ ವಿಚಿತ್ರ ಕಾನೂನು ಇರೋದಾದ್ರೂ ಎಲ್ಲಿ ಗೊತ್ತ?
ಹುಡುಗರು, ತಮ್ಮ ಹುಟ್ಟಿದ ದಿನವನ್ನಾಗಲಿ ಇಲ್ಲ ತಮ್ಮ ಸ್ನೇಹಿತರ ಹುಟ್ಟುಹಬ್ಬವನ್ನಾಗಲಿ ಭರ್ಜರಿಯಾಗೇ ಸೆಲೆಬ್ರಿಟ್ ಮಾಡುತ್ತಾರೆ. ಒಟ್ನಲ್ಲಿ ಬರ್ತ್ ಡೇ ಪಾರ್ಟಿ ಅಂದ್ರೆ ತಮ್ಮ ಯೌವ್ವನದಲ್ಲಿ ಸಖತ್ ಎಂಜಾಯ್ ಮಾಡೋದು ಪಕ್ಕಾ. ಇನ್ನು ಮದುವೆಯಾದ ಮೇಲೆ ತಕ್ಕ ಮಟ್ಟಿಗೆ ಇದಕ್ಕೆ ಬ್ರೇಕ್ ಬೀಳುವುದು ಸಹಜ. ನಂತರ ಅವರು ತಮ್ಮ ಹೆಂಡತಿಯ ಬರ್ತ್ ಡೇ ನೆನಪಿಟ್ಟುಕೊಂಡು ಅದನ್ನು ಸಂಭ್ರಮಿಸಬೇಕಾಗುತ್ತದೆ. ಆದರೆ ಎಷ್ಟೋ ಜನ ಗಂಡಂದಿರಿಗೆ ತಮ್ಮ ಹೆಂಡತಿಯ ಹುಟ್ಟಿದ ದಿನವೇ ನೆನಪಿರೋದಿಲ್ಲ. ಇದು ಸೃಷ್ಟಿಸೋ ಅವಾಂತರ ಮಾತ್ರ ಒಂದೊಂದಲ್ಲ. ಆದ್ರೆ ಇಲ್ಲೊಂದು ದೇಶದಲ್ಲಿ
ಹೆಂಡತಿಯ ಜನ್ಮದಿನವನ್ನು ಮರೆತರೆ ಗಂಡನಿಗೆ ಐದು ವರ್ಷ ಜೈಲು ಶಿಕ್ಷೆಯಂತೆ! ಅಬ್ಬಾ, ಎಲ್ಲಿ ಈ ಕಾನೂನು? ಯಾಕೆ ಹೀಗೆ ಗೊತ್ತಾ?
ಹೆಂಡತಿಯ ಜನ್ಮದಿನವನ್ನು ನೆನಪಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದು ವಿವಾಹಿತ ಪುರುಷರಿಗೇ ಗೊತ್ತು. ಏಕೆಂದರೆ ಅವರೇನಾದರು ತಮ್ಮ ಹೆಂಡತಿಯ ಬರ್ತ್ ಡೇ ಡೇಟ್ ಮರೆತ್ರೆ, ಅದು ಕೆಲವು ಸಂದರ್ಭಗಳಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಗಂಡನಿಗೆ ತನ್ನ ಹುಟ್ಟುಹಬ್ಬ ನೆನಪಿಲ್ಲ ಎಂದು ಹೆಂಡತಿ ಮನೆಬಿಟ್ಟು ಹೋದ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಕೆಲವೊಮ್ಮೆ ಅವರು ತಿಂಗಳುಗಟ್ಟಲೆ ಮಾತನಾಡುವುದಿಲ್ಲ. ಹೀಗೆ ಸಣ್ಣ ವಿಷಯಕ್ಕಾಗಿ ಏನೇನೋ ಅದ್ವಾನಗಳು ನಡೆದಿವೆ.
ಇಲ್ಲೊಂದು ದೇಶದಲ್ಲಿ ಮಾತ್ರ ಗಂಡನು, ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮರೆತುಬಿಟ್ರೆ ಅದನ್ನು ಅಪರಾಧ ಎಂದು ಹೇಳುತ್ತೆ! ಇದರ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೆಂಡತಿಯ ಬರ್ತ್ ಡೇ ಯನ್ನು ಏನಾದರೂ ಗಂಡ ಮರೆತರೆ ಆತನಿಗೆ ಇಲ್ಲಿ ಐದು ವರ್ಷ ಜೈಲು ಶಿಕ್ಷೆ ಕಟ್ಟಿಟ್ಟಬುತ್ತಿ!
ಹೌದು, ಸಮೋವಾ ಅನ್ನೋ ದ್ವೀಪ ರಾಷ್ಟ್ರದಲ್ಲಿ ಈ ವಿಚಿತ್ರ ಕಾನೂನು ಅಸ್ತಿತ್ವದಲ್ಲಿದ್ದು, ಕೇಳುಗರೆಲ್ಲರಿಗೂ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಜಗತ್ತಿಗೆ ಹೆಸರುವಾಸಿಯಾಗಿರುವ ಈ ದ್ವೀಪ ರಾಷ್ಟ್ರದಲ್ಲಿ ಕಾನೂನುಗಳು ತುಂಬಾ ಕಠಿಣವಾಗಿವೆ. ಅವುಗಳಲ್ಲಿ ಈ ಬರ್ತ್ ಡೇ ಕಾನೂನು ಒಂದು. ಇಲ್ಲಿ ಗಂಡ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಆಕಸ್ಮಿಕವಾಗಿ ಮರೆತರೆ ಅದನ್ನು ದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಪತಿ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಮರೆತರೆ, ಅವನಿಗೆ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಕೋಪಗೊಂಡ ಪತ್ನಿ ದೂರು ನೀಡಿದರೆ, ಪತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಇನ್ನು ಸಮೋವಾ ದೇಶದಲ್ಲಿ ಮಾತ್ರ ಈ ರೀತಿ ವಿಚಿತ್ರ ಕಾನೂನು ಇರುವುದಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಈಗಲೂ ಇಂತಹ ವಿಚಿತ್ರ ಕಾನೂನುಗಳಿವೆ. ಇವುಗಳಲ್ಲಿ ಹಲವು ಕಾನೂನುಗಳು ದಶಕಗಳಷ್ಟು ಹಳೆಯವು ಮತ್ತು ಇಂದಿಗೂ ಬದಲಾಗಿಲ್ಲ. ಉತ್ತರ ಕೊರಿಯಾದಲ್ಲಿ ನೀವು ನೀಲಿ ಜೀನ್ಸ್ ಧರಿಸಿ ಹೊರಗೆ ಹೋದರೆ, ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಪೂರ್ವ ಆಫ್ರಿಕಾದಲ್ಲಿ ನೀವು ಜಾಗಿಂಗ್ ಮಾಡಲು ಸಾಧ್ಯವಿಲ್ಲ, ಏಕೆಂದರೆ ಇದನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಜರ್ಮನಿಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ, ಪೆಟ್ರೋಲ್ ಖಾಲಿಯಾದಾಗ ನಿಮ್ಮ ವಾಹನವನ್ನು ರಸ್ತೆಯ ಮೇಲೆ ಬಿಟ್ಟರೆ, ನಿಮ್ಮನ್ನು ಜೈಲಿಗೆ ಹಾಕಬಹುದು.
ಇಂತಹ ವಿಚಿತ್ರ ಕಾನೂನುಗಳನ್ನು ನೋಡಿದ್ರೆ ನಾವೇ ನಿಜಕ್ಕೂ ಪುಣ್ಯವಂತರು ಅನಿಸುತ್ತೆ ಅಲ್ವಾ? ಭಾರತದಲ್ಲಿ ಇರುವ ಕಾನೂನು ನಿಜಕ್ಕೂ ಜನರಿಗೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡಿಲ್ಲ. ಇರುವ ಕಾನೂನುಗಳ ಚೌಕಟ್ಟಲ್ಲಿ ಸರಿಯಾಗಿ ಬದುಕಿದರೆ ಇಲ್ಲಿಗಿಂತ ನೆಮ್ಮದಿಯ ಬದುಕು ಬೇರೆಲ್ಲೂ ಸಿಗುವುದಿಲ್ಲ.