ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಎಸ್ಡಿಪಿಐ ನಿಂದ ಟಿಕೆಟ್ ಘೋಷಣೆ ! ಜೈಲಿನಿಂದಲೇ ಶಾಫಿ ಬೆಳ್ಳಾರೆ ಸ್ಪರ್ಧೆ ?
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಎನ್ ಐಎ ವಶದಲ್ಲಿರುವ ಶಾಫಿ ಬೆಳ್ಳಾರೆ ಅವರಿಗೆ ಪುತ್ತೂರು ಕ್ಷೇತ್ರದಿಂದ ಎಸ್ ಡಿಪಿಐ ಟಿಕೆಟ್ ಘೋಷಣೆ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಇದ ಆಡಳಿತಾರೂಢ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದು, ಜನರ ಆಕ್ರೋಶ ಭುಗಿಲೇಳುವ ಲಕ್ಷಣಗಳು ಕಾಣುತ್ತಿವೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ ಐ ಎ ವಶದಲ್ಲಿರುವ ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಗೆ ಎಸ್ಡಿಪಿಐ ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಟಿಕೆಟ್ ಘೋಷಣೆ ಮಾಡಿದೆ. ಎಸ್ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಈ ವಿಚಾರ ಘೋಷಣೆಯಾಗಿದೆ ಎನ್ನಲಾಗಿದೆ. ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಇಂದ ಈಗಾಗಲೇ ಬಂಧಿನವಾಗಿರುವ ಶಾಫಿ ಬೆಳ್ಳಾರೆ ಇದೀಗ ಜೈಲಿನಿಂದಲೇ ಚುನಾವಣೆಯನ್ನು ಸ್ಪರ್ಧಿಸಲು ಮುಂದಾಗಿದ್ದಾರೆ. ಕೊಲೆ ಆರೋಪಿಯನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವ ಎಸ್ಡಿಪಿಐ ತೀವ್ರ ಟೀಕೆಗೆ ಗುರಿಯಾಗಿದೆ.
ಎಸ್ಡಿಪಿಐ ಟಿಕೆಟ್ ನೀಡಿದ ವಿಚಾರವಾಗಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಹಿಂದು ಕಾರ್ಯಕರ್ತರ ಹತ್ಯೆ ಮಾಡಿದವರನ್ನು ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿರೋದು ಭಯ ಮೂಡಿಸಿದೆ. ಸಮಾಜದಲ್ಲಿ ತಲ್ಲಣ ಉಂಟುಮಾಡಿದವರನ್ನು ಪ್ರಜಾಪ್ರಭುತ್ವದ ದೇಗುಲಕ್ಕೆ ಕರೆದುಕೊಂಡು ಬರುವುದು ನೋಡಿದರೆ ಎಸ್ಡಿಪಿಐ ಕರಾಳ ಮುಖ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಂದಾಯ ಸಚಿವ ಆರ್. ಅಶೋಕ್, ಭಯೋತ್ಪಾದಕರನ್ನು ಕರೆದುಕೊಂಡು ಬಂದು ಟಿಕೆಟ್ ನೀಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇಶದಲ್ಲಿ ಪಿಎಫ್ ಐ ಅನ್ನು ನಿಷೇಧಿಸಿರುವ ಹಾಗೆ ಎಸ್ ಡಿಪಿಐ ಅನ್ನೂ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಫಿ ಬೆಳ್ಳಾರೆ ಚನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಸಮರ್ಥಿಸಿಕೊಂಡಿದ್ದು, ಕಾನೂನು ನೀಡಿರುವ ಅವಕಾಶವನ್ನು ಬಳಸಿಕೊಂಡು ಶಾಫಿ ಸ್ಪರ್ಧೆ ಮಾಡಲಿದ್ದಾರೆ. ಚುನಾವಣೆಯ ಸಮಯಕ್ಕಾಗುವಾಗ ಜಾಮೀನಿಗೆ ಪ್ರಯತ್ನಿಸುತ್ತೇವೆ. ಶಾಫಿ ಪರವಾಗಿ ಪ್ರತಿಯೊಬ್ಬ ಕಾರ್ಯಕರ್ತ ಪ್ರಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.