Post Office Gram Suraksha Yojana | ರೈತರಿಗಾಗಿಯೇ ಇದೆ ಪೋಸ್ಟ್ ಆಫೀಸ್ ನ ಈ ಯೋಜನೆ | ಪ್ರತಿದಿನ ಕೇವಲ 50 ರೂ. ಗಳನ್ನು ಹೂಡಿಕೆ ಮಾಡಿ ಪಡೆಯಬಹುದು ತಿಂಗಳಿಗೆ 1500 ರೂ.
ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಪೋಸ್ಟ್ ಆಫೀಸ್‌ನಲ್ಲಿವೆ.
ಅಂತಹ ಉತ್ತಮ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಗ್ರಾಮ್ ಸುರಕ್ಷಾ ಯೋಜನೆ ಕೂಡ ಒಂದು. ಈ ಯೋಜನೆಯು ಗ್ರಾಮೀಣ ಜನರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆ ಮೂಲಕ ಪ್ರತಿದಿನ ಕೇವಲ 50 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ 31 ಲಕ್ಷದಿಂದ 35 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ಮರಳಿ ಪಡೆಯಬಹುದು. ಅಲ್ಲದೆ, ಪಾಲಿಸಿಯನ್ನು ಖರೀದಿಸಿದ ದಿನಾಂಕದಿಂದ 4 ವರ್ಷಗಳ ನಂತರ ಸಾಲವನ್ನು ಸಹ ಪಡೆಯಬಹುದು. ಪಾಲಿಸಿಯ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಡೀಫಾಲ್ಟ್ ಆಗಿದ್ದರೆ, ಬಾಕಿ ಇರುವ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಮತ್ತೆ ಪ್ರಾರಂಭಿಸಬಹುದು.
ಇದರಲ್ಲಿ ಕನಿಷ್ಠ 1,000 ರಿಂದ 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳನ್ನೂ ನೀಡಲಾಗುತ್ತದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಕಂತನ್ನು ಪಾವತಿಸಬಹುದು. ಹೂಡಿಕೆದಾರರು ಒಂದು ವೇಳೆ ತನ್ನ 80 ವರ್ಷ ವಯಸ್ಸಿನಲ್ಲಿ ಮರಣಹೊಂದಿದರೆ, ಅವರ ನಾಮಿನಿಗೆ ಬೋನಸ್ ಸೇರಿದಂತೆ ಹೂಡಿಕೆಯ ಸಂಪೂರ್ಣ ಮೊತ್ತ ಸಿಗುತ್ತದೆ. ಈ ಯೋಜನೆಯಲ್ಲಿ 19 ವರ್ಷದಿಂದ 55 ವರ್ಷಗಳವರೆಗೆ ಭಾರತದ ಯಾವುದೇ ನಾಗರಿಕರು ಹೂಡಿಕೆ ಮಾಡಬಹುದು.