ಜೆಡಿಎಸ್‌ ಶಾಸಕ ಶಿವಲಿಂಗೇಗೌಡ್ರು ಕಾಂಗ್ರೆಸ್ ಸೇರೋದು 100% ಸತ್ಯ ಎಂದ ಸಿದ್ದು! ಹಾಗಿದ್ರೆ ಯಾರಾಗ್ತಾರೆ ಗೊತ್ತಾ ಅರಸೀಕೆರೆ ‘ಅರಸ’?

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳ ಪೈಕಿ ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರವೂ ಒಂದು. ಅಲ್ಲಿನ ಹಾಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಲವು ಸಮಯದಿಂದ ಪಕ್ಷ ಬದಲಿಸುತ್ತಾರೆ, ಕಾಂಗ್ರೆಸ್ ಸೇರುತ್ತಾರೆ ಎಂದು ವದಂತಿಗಳು ಹಬ್ಬುತ್ತಿದ್ದವು. ಆದರೀಗ ಈ ವದಂತಿ ನಿಜವಾಗುತ್ತಿದ್ದು, ಜೆಡಿಎಸಕ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಿವಲಿಂಗೇಗೌಡ್ರು 100% ಕಾಂಗ್ರೆಸ್‌ಗೆ ಬರುತ್ತಾರೆ. ನಾವು ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ತೇವೆ ಎಂದರು. ಅಲ್ಲದೆ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಇಂದ ಸರ್ವೆ ಆಗಿದೆ. ಅದರಲ್ಲಿ ಯಾರು ಗೆಲ್ಲುತ್ತಾರೆ ಅವರಿಗೆ ಕೊಡುತ್ತೇವೆ ಎಂದರು. ನಂತರ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಅವನೊಬ್ಬ ವಿದೂಷಕ, ಜೋಕರ್, ಪೊಲಿಟಿಕಲ್ ಜೋಕರ್ ಕುಟುಕಿದರು.

ಬಿಜೆಪಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎನ್ನಲು ಅವರು ಯಾರು? ಸಂವಿಧಾನ ನನಗೆ ಹಕ್ಕು ಕೊಟ್ಟಿದೆ. ಅದನ್ನು ಮೀರಿ ಮಾತನಾಡೋಕೆ ಇವರಿಗೇನು ಅಧಿಕಾರ ಇದೆ? ಸಿದ್ದರಾಮಯ್ಯಗೆ ಹಕ್ಕಿಲ್ಲ ಅನ್ನೋದಕ್ಕೆ ಇವರಿಗೇನು ಸಂವಿಧಾನ ಹಕ್ಕು ಕೊಟ್ಟಿದೆಯಾ? ಸಂವಿಧಾನ ಓದಿಕೊಂಡಿದ್ದಾರಾ ಅವರು? ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ‍್ಯ ಕಿತ್ತುಕೊಳ್ಳುವುದಕ್ಕೆ ಅವರು ಸುಪ್ರೀಂ ಕೋರ್ಟಾ? ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಅಧಿವೇಶನ ಮುಗಿಯುವುದರೊಳಗೆ ಮುಂದಿನ ನಡೆ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಹೇಳದೆ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಫೆ.12ರಂದು ಸಮಾವೇಶ ಮಾಡಲಾಗುತ್ತಿದೆ. ಆ ಸಭೆಯಲ್ಲಿ ಏನಾಗಲಿದೆಯೋ ಅದರ ಆಧಾರದ ಮೇಲೆ ನಾನು ಕಾರ್ಯಕರ್ತರ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ನಾನು ಬಿಜೆಪಿಗೆ ಸೇರುವುದಿಲ್ಲ. ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ ಎಂದಿದ್ದರು.

ಶಿವಲಿಂಗೇಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಅಂತಿಮ ಹಂತದ ಕಸರತ್ತು ನಡೆಸುತ್ತಿರುವ ಶಾಸಕ ಎಚ್‌.ಡಿ. ರೇವಣ್ಣ, ಕ್ಷೇತ್ರದ ಕಾರ್ಯಕರ್ತರಿಂದಲೇ ಶಿವಲಿಂಗೇಗೌಡರಿಗೆ ಮನವಿ ಮಾಡಿಸಿದ್ದಾರೆ. ಅದಾಗ್ಯೂ ಶಿವಲಿಂಗೇಗೌಡರು ಪಕ್ಷ ತ್ಯಜಿಸುವ ನಿರ್ಧಾರ ಪ್ರಕಟಿಸಿದರೆ, ತಕ್ಕ ಪಾಠ ಕಲಿಸುವ ಯೋಜನೆಯನ್ನೂ ರೂಪಿಸಿದ್ದಾರೆ.
ಶಿವಲಿಂಗೇಗೌಡರು ಕಾಂಗ್ರೆಸ್‌ ಸೇರ್ಪಡೆಯಾದರೆ, ಸಂಸದ ಪ್ರಜ್ವಲ್‌ ರೇವಣ್ಣ ಅರಸೀಕೆರೆಯ ಜೆಡಿಎಸ್‌ ಅಭ್ಯರ್ಥಿಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಈಗಾಗಲೇ ಅರಸೀಕೆರೆಯ ಕ್ಷೇತ್ರದ ಮುಖಂಡರು, ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಜ್ವಲ್‌ ರೇವಣ್ಣ ಅವರನ್ನೇ ಕಣಕ್ಕೆ ಇಳಿಸುವಂತೆ ಜೆಡಿಎಸ್ ಕಾರ್ಯಕರ್ತರು ಸಲಹೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.