Haj 2023 Application Begins : ಹಜ್ ಯಾತ್ರೆ ಕೈಗೊಳ್ಳುವವರೇ ಇತ್ತ ಗಮನಿಸಿ, ಹಜ್ ಯಾತ್ರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ! ಯಾರು, ಹೇಗೆ ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
ಇಸ್ಲಾಂ (Islam) ಧರ್ಮದಲ್ಲಿ ಹಜ್ (Haj) ಯಾತ್ರೆ ಮಾಡುವುದಕ್ಕೇ ಅದರದೇ ಆದ ಮಹತ್ವವಿದೆ. ಸೌದಿ ಅರೇಬಿಯಾದ ಮೆಕ್ಕಕ್ಕೆ ವಾರ್ಷಿಕ ಯಾತ್ರೆ ಕೈಗೊಳ್ಳುವುದನ್ನು ಹಜ್ ಯಾತ್ರೆ ಎನ್ನುತ್ತಾರೆ. ಇದು ಮುಸ್ಲಿಂ ಧರ್ಮೀಯರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಹಂಬಲದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಅಮೂಲ್ಯ ಅವಕಾಶವಾಗಿರುವ ಈ ಯಾತ್ರೆಗೆ ಈಗಾಗಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಸದ್ಯ ಈ ವರ್ಷ ಭಾರತದಿಂದ ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ವರ್ಷದ ಹಜ್ ಯಾತ್ರೆಯ ವೆಚ್ಚ ಕಡಿಮೆಯಾಗಲಿದೆ. ನೀವು ಕೂಡಾ ಹಜ್ ಯಾತ್ರೆ ಕೈಗೊಳ್ಳಲು ಉದ್ದೇಶಿಸಿದರೆ ಈಗಲೇ ಆನ್ಲೈನ್ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಹೌದು, ಹಜ್ ಯಾತ್ರೆ ಕೈಗೊಳ್ಳಲು ಸಾಮಾನ್ಯವಾಗಿ3 ಲಕ್ಷದಿಂದ 3.5 ಲಕ್ಷದವರೆಗೆ ಖರ್ಚಾಗುತ್ತದೆ. ಆದರೆ, ಈ ಬಾರಿ ಹಜ್ ಯಾತ್ರೆಯ ದರವನ್ನು ಪ್ರತಿವ್ಯಕ್ತಿಗೆ 50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ಹಜ್ ಯಾತ್ರೆಗೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಕಳೆದ ವರ್ಷ 400 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆಬ್ರವರಿ 10ರಿಂದಲೇ ಆರಂಭವಾಗಿದೆ.
ಸುಮಾರು 1.75 ಲಕ್ಷ ಜನರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಶೇಕಡ 80ರಷ್ಟು ಜನರು ಹಜ್ ಕಮಿಟಿ ಮೂಲಕ ಯಾತ್ರೆ ಕೈಗೊಂಡರೆ, ಮತ್ತೆ ಸುಮಾರು ಶೇಕಡ 20ರಷ್ಟು ಜನರು ಖಾಸಗಿ ಪ್ರವಾಸಿ ಆಪರೇಟರ್ಗಳ ನೆರವಿನಿಂದ ಯಾತ್ರೆ ಕೈಗೊಳ್ಳುತ್ತಾರೆ.
“ಈ ಬಾರಿಯ ಹಜ್ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿದ್ದು, ಎಲ್ಲಾ ಹಜ್ ಯಾತ್ರಿಗಳು ಯಾವುದೇ ಖರ್ಚು ಮಾಡದೆ ಅರ್ಜಿ ಸಲ್ಲಿಸಬಹುದು. ಈ ಬಾರಿ ಹಜ್ ಯಾತ್ರೆಯ ದರವನ್ನು 50 ಸಾವಿರ ರೂ.ಗೆ ತಗ್ಗಿಸಲಾಗಿದೆ. ಬ್ಯಾಗ್, ಸೂಟ್ಕೇಸ್, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಹೀಗಿದ್ದರೂ, ಹಜ್ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕು. ಹಜ್ ಯಾತ್ರೆಯಲ್ಲಿ ಹಿರಿಯರು, ವಿಶೇಷ ಚೇತನರು ಮತ್ತು ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು” ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹಜ್ ಯಾತ್ರೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 10, 2023
ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 10, 2023
ಅರ್ಜಿ ಸಲ್ಲಿಸಲು ಮೊದಲಿಗೆ ಅಧಿಕೃತ ವೆಬ್ಸೈಟ್ ( https://hajcommittee.gov.in/ ) ಗೆ ಭೇಟಿ ನೀಡಿ. ವೆಬ್ಸೈಟ್ನ ಮುಖಪುಟದಲ್ಲಿಯೇ ಹಜ್ 2023 ಎಂಬ ಲಿಂಕ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ಅಲ್ಲಿ ಆನ್ಲೈನ್ ಅಪ್ಲಿಕೇಷನ್ ಫಾರ್ಮ್ ಮೇಲೆ ಕ್ಲಿಕ್ ಮಾಡಬೇಕು. ನ್ಯೂ ರಿಜಿಸ್ಟ್ರೇಷನ್ (ಹೊಸ ನೋಂದಣಿ) ಲಿಂಕ್ ಅನ್ನು ಕ್ಲಿಕ್ ಮಾಡಿ ಹಾಗೂ ಅಲ್ಲಿ ಕೇಳಲಾದ ವಿವರವನ್ನು ಭರ್ತಿ ಮಾಡಿರಿ. ನಂತರ ಒಟಿಪಿ ನಮೂದಿಸಿದ ಬಳಿಕ ಕನ್ಫರ್ಮೆಷನ್ ಸಂದೇಶ ಕಾಣಿಸಿಕೊಳ್ಳುತ್ತದೆ. ಯೂಸರ್ ಐಡಿ (ಮೊಬೈಲ್ ಸಂಖ್ಯೆ) ಮತ್ತು ಪಾಸ್ವರ್ಡ್ ನಮೂದಿಸಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿರಿ. ಅರ್ಜಿ ಸಲ್ಲಿಸಿದ ಬಳಿಕ ನಿಗದಿಪಡಿಸಿದ ದಾಖಲೆಗಳನ್ನು ಸಲ್ಲಿಸಿ.
ದಾಖಲೆಗಳು: ಪಾಸ್ಪೋರ್ಟ್ ಗಾತ್ರದ ಫೋಟೊಗ್ರಾಪ್, ಪಾಸ್ಪೋರ್ಟ್ನ ಮೊದಲ ಪುಟ, ಪಾಸ್ಪೋರ್ಟ್ನ ಕೊನೆಯ ಪುಟ, ಕೊರೊನಾ ಲಸಿಕೆ ಸರ್ಟಿಫಿಕೇಟ್ ಲಗ್ಗತ್ತಿಸಿ. ನಂತರ ಫೈನಲ್ ಸಬ್ಮಿಟ್ ಕ್ಲಿಕ್ ಮಾಡಿ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು “ಡೌನ್ಲೋಡ್ HAF2023” ಬಟನ್ ಕ್ಲಿಕ್ ಮಾಡಿ.
ಆರೋಗ್ಯ ತಪಾಸಣೆಯನ್ನು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದ ತಪಾಸಣೆಯನ್ನು ಪರಿಗಣಿಸಲಾಗುವುದಿಲ್ಲ. ಈ ಕುರಿತಂತೆ ಅಲ್ಪಸಂಖ್ಯಾತರ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದೆ.