ವಾಟ್ಸಾಪ್‌ ಕಾಲ್‌ ಮೂಲಕ ಗರ್ಭಿಣಿಗೆ ಡೆಲಿವರಿ ಮಾಡಿಸಿದ ವೈದ್ಯರು! ಹೀಗೆ ಮಾಡಲು ಕಾರಣವೇನು ಗೊತ್ತೇ?

ಇಂದಿನ ದಿನಗಳಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಹೆರಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮೂಲಕವೇ ನಡೆಯುತ್ತದೆ. ಎಲ್ಲೋ ಅನಿವಾರ್ಯ ಅಂದಾಗ ಅಪರೂಪಕ್ಕೆ ಎಂಬಂತೆ ಹಳ್ಳಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಹಿರಿಯ ಅನುಭವಸ್ಥ ಮಹಿಳೆ ಹೆರಿಗೆ ಮಾಡಿಸುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಒಂದೆಡೆ, ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ವೈದ್ಯರೊಬ್ಬರು ಹೆರಿಗೆ ಮಾಡಿಸಿದಂತಹ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಜಮ್ಮು ಕಾಶ್ಮೀರದಲ್ಲಿ ಈಗ ಕೆಲ ದಿನಗಳಿಂದ ಹಿಮಪಾತ ಹೆಚ್ಚಾಗಿದ್ದು, ಇದರಿಂದ ಜನರು ವಿಮಾನದಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲ, ಪ್ರಕರಣವೊಂದರಲ್ಲಿ ಹೆರಿಗೆ ಮಾಡಿಸುವುದು ಸಹ ಕಷ್ಟವಾಗಿದೆಯಂತೆ. ಜಮ್ಮು ಮತ್ತು ಕಾಶ್ಮೀರದ ದೂರದ ಕೆರಾನ್‌ನಲ್ಲಿ ಗರ್ಭಿಣಿಯನ್ನು ಹಿಮಪಾತದ ಕಾರಣದಿಂದ ಏರ್‌ಲಿಫ್ಟ್‌ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ, ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ಆರಾಮದಾಯಕವಾಗಿ ಹೆರಿಗೆ ಆಗಲು ವೈದ್ಯರು ಸಹಾಯ ಮಾಡಿದ್ದು, ಮಹಿಳೆಯು ಆರೋಗ್ಯವಂತ ಮಗುವಿಗೆ ಜನ್ಮನೀಡಿದ್ದಾಳೆ.

ಶುಕ್ರವಾರ ರಾತ್ರಿ, ಎಕ್ಲಾಂಪ್ಸಿಯಾ, ದೀರ್ಘಕಾಲದ ಹೆರಿಗೆ ಮತ್ತು ಎಪಿಸಿಯೊಟೊಮಿ ಸೇರಿದಂತೆ ಸಂಕೀರ್ಣವಾದ ಹೆರಿಗೆಯ (Complicated Delivery) ಇತಿಹಾಸ ಹೊಂದಿರುವ ಕೇರನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Keran Primary Health Centre) ದಾಖಲಾಗಿದ್ದ ರೋಗಿಗೆ ಹೆರಿಗೆ ಮಾಡಿಸಿರುವ ಬಗ್ಗೆ ಕ್ರಾಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಮೀರ್ ಮೊಹಮ್ಮದ್ ಶಾಫಿ ಹೇಳಿದ್ದಾರೆ. ಚಳಿಗಾಲದಲ್ಲಿ (Winter) ಕುಪ್ವಾರ ಜಿಲ್ಲೆಯ ಉಳಿದ ಭಾಗಗಳಿಂದ ಕೇರನ್ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಯನ್ನು ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಆದರೆ, ಗುರುವಾರ ಮತ್ತು ಶುಕ್ರವಾರದ ನಿರಂತರ ಹಿಮಪಾತದ ಕಾರಣದಿಂದ ಅಧಿಕಾರಿಗಳು ವಾಯು ಸ್ಥಳಾಂತರಿಸುವಿಕೆಗೆ ವ್ಯವಸ್ಥೆಗೊಳಿಸುವುದನ್ನು ತಡೆಯಿತು. ಈ ಹಿನ್ನೆಲೆ ಕೇರನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ವೈದ್ಯಕೀಯ ಸಿಬ್ಬಂದಿಗೆ ಹೆರಿಗೆಯಲ್ಲಿ ಸಹಾಯ ಮಾಡಲು ಪರ್ಯಾಯ ಮಾರ್ಗವನ್ನು ಹುಡುಕುವಂತೆ ತಿಳಿಸಲಾಯಿತು.

ನಂತರ ಕೇರನ್‌ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಡಾ. ಅರ್ಷದ್ ಸೋಫಿಕ್ರಾಲ್ಪೋರಾ ಅವರು, ಕೇರನ್ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ. ಪರ್ವೈಜ್ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಕೂಡಲೇ ಪರ್ವೈಜ್, ಡಾ. ಅರ್ಷದ್ ಸೋಫಿಕ್ರಾಲ್ಪೋರಾ ಮತ್ತು ಅವರ ಅರೆವೈದ್ಯಕೀಯ ಸಿಬ್ಬಂದಿಗೆ ವಾಟ್ಸಾಪ್ ಕಾಲ್‌ ಮಾಡಿ ಮಗುವನ್ನು ಹೆರಿಗೆ ಮಾಡುವ ಕಾರ್ಯವಿಧಾನದ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಬಳಿಕ, ಮಹಿಳೆಯನ್ನು ಹೆರಿಗೆಗೆ ಒಳಪಡಿಸಲಾಯಿತು. ಆಕೆ 6 ಗಂಟೆಗಳ ನಂತರ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.