ದಳಪತಿಯ ‘ಬ್ರಾಹ್ಮಣ ಸಿಎಂ’ ಅಸ್ತ್ರಕ್ಕೆ ತಿರುಗುಬಾಣ ಬಿಟ್ಟ ಶಾ! ಮುಂದೆ ಕೂಡ ಬೊಮ್ಮಾಯಿನೇ ಸಿಎಂ ಅನ್ನೋ ಶಾಸನ ಬರೆದ್ರಾ?
ರಾಜ್ಯದಲ್ಲಿ ಚುನಾವಣೆ ಹತ್ತಿರವಾದರೂ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನಾಗಲಿ, ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಎಂಬ ಗುಟ್ಟನ್ನಾಗಲಿ ಬಿಟ್ಟುಕೊಡುತ್ತಿಲ್ಲ. ಆದರೆ ಭರ್ಜರಿಯಾಗಿ ಚುನಾವಣಾ ತಯಾರಿ ನಡೆಸುತ್ತಿವೆ. ಈ ನಡುವೆ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಸಿಎಂ ವಿಚಾರವಾಗಿ ಚಕಾರವೆತ್ತಿ ‘ಬ್ರಾಹ್ಮಣ ಸಿಎಂ’ ಬಾಂಬ್ ಸಿಡಿಸಿದ್ದರು. ಆದರೀಗ ಕರ್ನಾಟಕಕ್ಕೆ ಆಗಮಿಸಿದ್ದ ಕೇಸರಿ ಚಾಣಕ್ಯ ಈ ‘ಬ್ರಾಹ್ಮಣ ಸಿಎಂ’ ಯುದ್ಧಕ್ಕೆ ತೆರೆ ಎಳೆದಂತೆ ಕಾಣುತ್ತಿದ್ದು, ಮತ್ತೆ ಬೊಮ್ಮಾಯಿನೇ ಸಿಎಂ ಎಂದು ಪರೋಕ್ಷವಾಗಿ ಹೇಳಿದಂತಿದೆ.
ಹೌದು, ಮೊನ್ನೆ ತಾನೆ ಅಮಿತ್ ಶಾ ಕರಾವಳಿಯ ಬಿಜೆಪಿ ಭದ್ರ ಕೋಟೆ ಪುತ್ತೂರಿಗೆ ಆಗಮಿಸಿದ್ದು ಬೊಮ್ಮಾಯಿಗೆ ಆನೆ ಬಲ ತಂದುಕೊಟ್ಟಂತಾಗಿದೆ. ಅಮಿತ್ ಶಾ ಕರ್ನಾಟಕ ಕುರುಕ್ಷೇತ್ರದಲ್ಲಿ ಮತ್ತೊಮ್ಮೆ ಕೇಸರಿ ರಣಕಹಳೆ ಮೊಳಗಿಸಿದ್ದಾರೆ. ಅಲ್ಲದೆ ಕರಾವಳಿಯಲ್ಲಿ ಅಬ್ಬರಿಸಿರೋ ಅಮಿತ್ ಶಾ ಇಂದು ನೀವೆಲ್ಲರೂ ಬಿಜೆಪಿ ಕೈ ಹಿಡಿದಿದ್ದೀರಿ. ಮುಂದೆಯೂ ಬಿಜೆಪಿಯೊದಿಗಿದ್ದು ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಿ ಅಂದಿದ್ದಾರೆ.
ಅಮಿತ್ ಶಾ ಈ ರೀತಿ ಹೇಳಿದ್ದು, ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಬಸವರಾಜ ಬೊಮ್ಮಾಯಿಯವರೇ ಮುಂದಿನ ಸಿಎಂ ಅನ್ನುವುದನ್ನು ಪರೋಕ್ಷವಾಗಿ ಹೇಳಿದಂತಾಗಿದೆ. ಜೊತೆಗೆ ಮುಂದೆಯೂ, ಬೊಮ್ಮಾಯಿಯೇ ಸಿಎಂ ಅನ್ನೋ ಸುಳಿವು ನೀಡಿದಂತಾಗಿದೆ. ಅಲ್ಲದೆ ಅಮಿತ್ ಶಾ, ಬೊಮ್ಮಾಯಿ ಪರ ಮಾತಾಡುತ್ತಿರುವುದು ಇದೇ ಮೊದಲಲ್ಲ. ಅವರು ಎರಡು ವರ್ಷಗಳ ಹಿಂದೆಯೇ ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದರು. 2021ರ ವೇಳೆಯಲ್ಲಿ ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಮುಂದೆ ನಾವು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀವಿ ಅಂದಿದ್ರು.
ಅಲ್ಲದೆ ಬೊಮ್ಮಾಯಿ ಅವರಿಗೆ ಸರ್ಕಾರ ಹಾಗೂ ಆಡಳಿತ ಮಾಡುವುದರಲ್ಲಿ ಸಾಕಷ್ಟು ಅನುಭವ ಇದೆ. ಅವರು ಸುದೀರ್ಘ ವರ್ಷಗಳಿಂದ ಭಾರತೀಯಜನತಾ ಪಾರ್ಟಿಯಲ್ಲಿದ್ದಾರೆ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮುಂದೆಯೂ ಕೂಡ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸಂಪೂರ್ಣ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು.
ಹಾಗಾಗಿ ಈ ಭಾರೀಯೂ ಬೊಮ್ಮಾಯಿ ಪರ ಮಾತನಾಡಿದ ಅಮಿತ್ ಶಾ ಮಾತುಗಳು ನಾಡಿನ ಜನರಲ್ಲಿ ಕುತೂಹಲ ಕೆರಳಿಸಿದ್ದು, ಬೊಮ್ಮಾಯಿಯೇ ಮುಂದಿನ ಸಿಎಂ ಆಗುತ್ತಾರಾ? ಎಂದು ಎದುರುನೋಡುವಂತಾಗಿದೆ. ಇದರೊಂದಿಗೆ ಪುತ್ತೂರಲ್ಲಿ ಶಾ, ಬೊಮ್ಮಾಯಿ ಕುರಿತು ಮಾತಾಡುವುದರೊಂದಿಗೆ ರಾಜಾಹುಲಿಯನ್ನ ಮರೆಯಲಿಲ್ಲ. ಯಡಿಯೂರಪ್ಪರನ್ನು ಗುಣಗಾನ ಮಾಡಿದ ಅವರು, ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿಯಿಲ್ಲ. ಬಿಜೆಪಿಯಿಲ್ಲದೆ ಯಡಿಯೂರಪ್ಪ ಇಲ್ಲ ಎಂದು ಹೇಳಿದರು.