ಕಳ್ಳನನ್ನು ಪೋಲೀಸರಿಗೊಪ್ಪಿಸಿದವು, ಆತನದೇ ಆದ ಚಿನ್ನದ ಹಲ್ಲುಗಳು! ಇದು ಕಥೆಯಲ್ಲ, 15 ವರ್ಷ ತಲೆಮರೆಸಿಕೊಂಡಿದ್ದ ಚಿನ್ನದ ಹಲ್ಲಿನ ಖದೀಮನ ವ್ಯಥೆ!

ಆತ 15 ವರ್ಷಗಳ ಹಿಂದೆ ತನ್ನ ಮಾಲೀಕನಿಗೆ ಸುಮಾರು 40ಸಾವಿರ ಹಣದೊಂದಿಗೆ ವಂಚಿಸಿ ಜೈಲುಪಾಲಾಗಿದ್ದ. ಬಳಿಕ ಜಾಮೀನಿನೊಂದಿಗೆ ಬಿಡುಗಡೆಯಾಗಿ ಇಲ್ಲೀವರೆಗೂ ತಲೆಮರೆಸಿಕೊಂಡೇ ಬದುಕಿದ್ದ. ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ. ಆದ್ರೆ ಈ ಕತರ್ನಾಕ್ ಕಳ್ಳ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ! ಹೌದು ಆತನ ಎರಡು ಚಿನ್ನದ ಹಲ್ಲುಗಳೇ ಅವನನ್ನು ಪೋಲಿಸರ ವಶಕ್ಕೆ ದೂಡಿ ಬಿಟ್ಟಿವೆ! ಏನಪ್ಪಾ ಇದು ಹೊಸತಾದ, ವಿಚಿತ್ರ ಕಥೆ ಅನ್ಕೊಂಡ್ರಾ? ನಿಜವಾಗಿಯೂ ಇದು ಕಥೆಯಲ್ಲ, ಚಿನ್ನದ ಹಲ್ಲಿನ ಕಳ್ಳನ ವ್ಯಥೆ!

ಹೌದು, ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ 38 ವರ್ಷದ ಪ್ರವೀಣ್‌ ಅಶುಭಾ ಜಡೇಜಾರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮುಂಬೈನ ಪರೆಲ್​ನ ಸೇವ್ರಿ ಎಂಬಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್​ಮ್ಯಾನ್​ ಆಗಿದ್ದ ಈ ಜಡೇಜಾ, 2007ರಲ್ಲಿ ತನ್ನ ಮಾಲೀಕನಿಗೆ 40 ಸಾವಿರ ರೂ. ವಂಚಿಸಿ ಪರಾರಿಯಾಗಿದ್ದ. ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಷ್ಟು ವರ್ಷಗಳ ಬಳಿಕ ಸಿಕ್ಕಿಬಿದ್ದಿರುವುದರಲ್ಲೂ ಒಂದು ರಹಸ್ಯವಿದೆ. ಪ್ರವೀಣ್‌ ಅಶುಭಾ ಎರಡು ಚಿನ್ನದ ಹಲ್ಲುಗಳನ್ನು ಹೊಂದಿದ್ದುದೇ ಇದಕ್ಕೆ ಕಾರಣ! ಇದೊಂದೇ ಪೊಲೀಸರಿಗೆ ಇದ್ದ ಮಾಹಿತಿಯಾಗಿತ್ತು. ಕೊನೆಗೆ ಇದರ ಆಧಾರದಲ್ಲಿಯೇ ಈತನನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಏನಿದು 15 ವರ್ಷಗಳ ಹಿಂದಿನ ಪ್ರಕರಣ ಎಂದು ನೋಡುವುದಾದರೆ 2007ರಲ್ಲಿ ಬಟ್ಟೆ ಅಂಗಡಿಯಲ್ಲಿ ಸೇನ್ಸ್‌ ಮೆನ್‌ ಅಗಿ ಕೆಲಸ ಮಾಡುತ್ತಿದ್ದ ಪ್ರವೀಣನಿಗೆ, ಇನ್ನೊಬ್ಬ ವ್ಯಾಪಾರಿಯಿಂದ 40 ಸಾವಿರ ರೂಪಾಯಿ ಪಡೆದುಕೊಂದು ಬರುವಂತೆ ಮಾಲೀಕ ಒಂದು ದಿನ ತಿಳಿಸಿದ್ದ. ಪಡೆದುಕೊಂಡ ಹಣವನ್ನು ಮಾಲೀಕನಿಗೆ ನೀಡುವ ಬದಲು, ನಾನು ಟಾಯ್ಲೆಟ್‌ಗೆ ಹೋಗಿ ಬರುವ ವೇಳೆ ಯಾರೋ ಒಬ್ಬರು ಈ ಹಣವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಕಥೆ ಕಟ್ಟಿದ್ದ. ಮಾಲೀಕನಿಗೆ ತಾನೇ ಕಟ್ಟಿದ ಈ ಕಥೆಯನ್ನು ತಿಳಿಸುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದ್ದ. ಇದರ ಮೇರೆಗೆ ದೂರು ಕೊಟ್ಟು ಪೊಲೀಸರಿಂದ ತನಿಖೆ ನಡೆದಾಗ ಇದರಲ್ಲಿ ಪ್ರವೀಣ್ ಪಾತ್ರವಿದೆ ಎಂಬುದು ಖಚಿತವಾಗಿ ಆತನ ಬಂಧನವಾಗಿತ್ತು. ಆದರೆ ಮೂರೇ ದಿನಗಳಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಪ್ರವೀಣ್​ ಬಳಿಕ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ.

ತಲೆಮರೆಸಿಕೊಂಡಿದ್ದವರನ್ನು ಪತ್ತೆ ಹಚ್ಚುವ ಅಭಿಯಾನದ ಅಂಗವಾಗಿ ಮುಂಬೈ ಪೊಲೀಸರು ಇತ್ತೀಚೆಗೆ ಮತ್ತೆ ಕಾರ್ಯಪ್ರವೃತ್ತರಾದಾಗ ಪ್ರವೀಣ್​ ಹೆಸರೂ ಮುನ್ನೆಲೆಗೆ ಬಂದಿದ್ದು, ಮತ್ತೆ ವಿವರಗಳನ್ನು ಕಲೆ ಹಾಕಲು ಮುಂದಾಗಿದ್ದರು. ಆತ ಕೆಲಸ ಮಾಡುತ್ತಿದ್ದ ಪರೇಲ್ ಪ್ರದೇಶಕ್ಕೆ ಹೋಗಿ ಮತ್ತೆ ವಿಚಾರಣೆ ನಡೆಸಿದಾಗ ಆತ ಎರಡು ಚಿನ್ನದ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದ ಮತ್ತು ಆತನ ಊರು ಗುಜರಾತ್​ನ ಕಛ್​ನ ಮಾಂಡವಿ ತಾಲೂಕಿನ ಸಭ್ರಾಯಿ ಎಂಬ ಮಾಹಿತಿ ಸಿಕ್ಕಿತ್ತು.

ಈ ಎರಡು ಚಿನ್ನದ ಕೃತಕ ಹಲ್ಲುಗಳನ್ನೇ ಪ್ರಮುಖ ಸುಳಿವಾಗಿ ಇರಿಸಿಕೊಂಡು ಆರೋಪಿಯ ಪತ್ತೆಗೆ ಕಾರ್ಯಾಚರಣೆಗೆ ಪೋಲೀಸರು ಮುಂದಾದರು. ಆದರೆ ಗುಜರಾತ್​ನ ಕಛ್​ನ ಆ ಪ್ರದೇಶದಲ್ಲಿ ಹಲವು ಮಂದಿ ಪ್ರವೀಣ್ ಜಡೇಜಾ ಅಂತಿದ್ದು, ಅವರ್ಯಾರಿಗೂ ಚಿನ್ನದ ಹಲ್ಲು ಇಲ್ಲ ಎಂದು ಹೇಳಿದ್ದರು. ಅದಾಗ್ಯೂ ಪ್ರದೀಪ್​ಸಿನ್ಹಾ ಜಡೇಜಾ ಅಂತ ಒಬ್ಬನಿದ್ದು, ಆತನಿಗೆ ಎರಡು ಚಿನ್ನದ ಹಲ್ಲುಗಳಿವೆ ಎಂದು ಪೋಲೀಸ್ ಮಾಹಿತಿದಾರರು ಹೇಳಿದ್ದರು. ಆ ನಂತರ ಅವನ ಫೋಟೋ ತರಿಸಿಕೊಂಡು ನೋಡಿದಾಗ ತಮಗೆ ಬೇಕಾದ ಆರೋಪಿ ಇವನೇ ಎಂಬುದು ಪೊಲೀಸರಿಗೆ ಖಚಿತವಾಗಿತ್ತು.

ನಂತರ ತಮ್ಮನ್ನು ಎಲ್​ಐಸಿ ಏಜೆಂಟ್​ಗಳು ಎಂದು ಬಿಂಬಿಸಿಕೊಂಡು ಪ್ರವೀಣ್​ನನ್ನು ಸಂಪರ್ಕಿಸಿದ ಪೊಲೀಸರು ಪಾಲಿಸಿ ಮೆಚ್ಯೂರ್ ಆಗಿದೆ, ಅದರ ಹಣ ಸಂಗ್ರಹಿಸಿಕೊಳ್ಳಲು ಮುಂಬೈನ ಸೇವ್ರಿಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದರು. ಹಾಗೆ ಗುರುವಾರ ಬಂದಿದ್ದ ಪ್ರವೀಣ್​ನನ್ನು ಅಲ್ಲಿ ದೂರುದಾರರು ಮತ್ತು ಒಟ್ಟಿಗೆ ಕೆಲಸ ಮಾಡುತ್ತಿದ್ದವರನ್ನು ಕರೆಸಿ ತೋರಿಸಿ ಅದು ಪ್ರವೀಣ್​ ಜಡೇಜಾ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.