‘ಬ್ರಹ್ಮಚಾರಿಗಳ ನಡೆ ಮಲೆ ಮಾದಪ್ಪನ ಕಡೆ’! 30 ದಾಟಿದ್ರೂ ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ದೇವರ ಮೊರೆ!
ಭಾರತದಲ್ಲಿ ಇಷ್ಟು ಜನಸಂಖ್ಯೆ ಇಷ್ಟೊಂದಿದ್ರೂ ಕೂಡ ಗಂಡಿಗೆ ಹೆಣ್ಣು ಹುಡುಕೋದು ಭಾರೀ ಕಷ್ಟ ಆಗ್ತಿದ್ಯಪ್ಪಾ. ಪಾಪ ನಮ್ಮ ಯುವಕರ ಕಥೆ ಕೇಳಿದ್ರೆನೇ ಬೇಸರ ಬಂದೋಗುತ್ತೆ. ವಯಸ್ಸು ದಾಟಿ ಬಿಳಿಗೂದಲೂ ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು ಸಹ ನಮ್ಮ ನಡುವೆ ಅನೇಕರಿದ್ದಾರೆ. ಎಷ್ಟೇ ಕಷ್ಟ ಪಟ್ರೂ ಹೆಣ್ಣುಕೊಡೋರು ದಿಕ್ಕಿಲ್ಲಂತಾಗಿದಾರೆ. ಈ ಮದುವೆ ಹೆಣ್ಣಿನ ವಿಷಯವಂತೂ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗ್ತಿದೆ. ಇದಕ್ಕಾಗಿ ನಮ್ಮ ಮದುವೆಯಾಗದ ಹುಡುಗರು ಮಾಡುವ ವಿನೂತನ ಪ್ರಯತ್ನಗಳು ನಿಜಕ್ಕೂ ನಮಗೆ ಅವರ ಮೇಲೆ ಮರುಕ ತರಿಸುತ್ತದೆ.
ಇತ್ತೀಚೆಗಷ್ಟೆ ಜಾತ್ರೆಯೊಂದರಲ್ಲಿ ರಥೋತ್ಸವದ ವೇಳೆ ಬಾಳೆ ‘ದೇವರೆ ರೈತರ ಮಕ್ಕಳಿಗೆ ಹೆಣ್ಣು ಸಿಗುವಂತಾಗಲಿ, ಹೆಣ್ಣು ಹೆತ್ತವರ ಮನಸ್ಸು ಬದಲಾಗಲಿ’ ಎಂದು ಬರೆದ ಬಾಳೆಹಣ್ಣನ್ನು ರಥಕ್ಕೆ ಎಸೆಯಲಾಗಿತ್ತು. ಇದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ಧಿಯಾಗಿತ್ತು. ಮತ್ತೀಗ ಇಂತಹದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ತಮಗೆ ವಧುವನ್ನು ಕರುಣಿಸಪ್ಪಾ ಬ್ರಹ್ಮಚಾರಿಗಳೆಲ್ಲ ದೇವರ ಮೊರೆ ಹೋಗಿದ್ದಾರೆ. ಈ ಅಪರೂಪದ ಸಂಗತಿಗೆ ಸಕ್ಕರೆ ನಾಡು ಮಂಡ್ಯ ಸಾಕ್ಷಿಯಾಗಿದೆ.
ಹೌದು, 30 ವರ್ಷ ದಾಟಿದರೂ ಮದುವೆಯಾಗಿಲ್ಲ ಅಂತಾ 200ಕ್ಕೂ ಹೆಚ್ಚು ಮಂದಿ ಬ್ರಹ್ಮಚಾರಿಗಳು ಶ್ರೀಘ್ರ ವಧು ಸಿಗಲೆಂದು ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ‘ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ’ ಎಂಬ ಶೀರ್ಷಿಕೆಯೊಂದಿಗೆ ಪಾದಯಾತ್ರೆ ಹೊರಟಿದ್ದಾರೆ.
ಶೀಘ್ರ ವಧು ಸಿಗಲೆಂದು ಪ್ರಾರ್ಥಿಸಿ 200ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಇದೇ ಫೆ.23 ರಂದು ಮಂಡ್ಯದ ಕೆಎಂ ದೊಡ್ಡಿಯಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಕೇವಲ ಮಂಡ್ಯ ಜಿಲ್ಲೆಯವರಲ್ಲದೇ ಮೈಸೂರು, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬ್ರಹ್ಮಚಾರಿಗಳು ಭಾಗಿಯಾಗಲಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಲ್ಪಿಸಲಾಗಿದೆ.
ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ಆಯೋಜಕರಿಂದ 3 ಷರತ್ತು ಹಾಕಲಾಗಿದೆ. ಮೊದಲನೆಯದು ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಎರಡನೆಯದು ವಿವಾಹಿತರಿಗೆ ಪಾದಾಯಾತ್ರೆಯಲ್ಲಿ ಅವಕಾಶ ಇಲ್ಲ ಮತ್ತು ಮೂರನೆಯದು ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಗೆ ಬರುವಂತಿಲ್ಲ.
ಅವಿವಾಹಿತರನ್ನು ಸಂಘಟಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಶಿವಪ್ರಸಾದ್ ಹಾಗೂ ವೆಂಕಟೇಶ್ ಎಂಬುವರ ನೇತೃತ್ವದಲ್ಲಿ ಈ ಬ್ರಹ್ಮಚಾರಿಗಳ ಪಾದಯಾತ್ರೆಯನ್ನು ಆಯೋಜನೆ ಮಾಡಲಾಗಿದೆ. ಈ ಪಾದಾಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಫೆ.15ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.