ಕೇಂದ್ರ ಗೃಹಸಚಿವ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಭೇಟಿ | ಪೊಲೀಸ್ ಸರ್ಪಗಾವಲು
ಪುತ್ತೂರು : ಕೇಂದ್ರ ಗೃಹಸಚಿವ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಇಂದು ಭೇಟಿ ನೀಡುತ್ತಿದ್ದು, ಭೇಟಿಯ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಫ್ಕೋ ದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಅಮಿತ್ ಶಾ ಗೆ ಸ್ವಾಗತ ಕೋರುವ ಬ್ಯಾನರ್‌ಗಳು ನಗರ ತುಂಬಾ ರಾರಾಜಿಸುತ್ತಿದೆ.
ಗೃಹ ಸಚಿವ ಹಾಗೂ ದೇಶದ ಮೊದಲ ಕೇಂದ್ರ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಪುತ್ತೂರಿಗೆ ಭೇಟಿ ನೀಡುವ ಮೂಲಕ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ನಲ್ಲಿ ಇಳಿಯಲಿರುವ ಗೃಹಸಚಿವರು ಈಶ್ವರಮಂಗಲದ ಅಮರಗಿರಿಯಲ್ಲಿ ನಿರ್ಮಾಣವಾಗಿರುವ ದಕ್ಷಿಣಭಾರತದ ಎರಡನೇ ಭಾರತ್ ಮಾತೆಯ ಮಂದಿರವನ್ನು ಲೋಕಾರ್ಪಣೆ ಮಾಡಲಿರುವರು.
ಬಳಿಕ ಅವರು ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಎನ್.ಆರ್.ಸಿ.ಸಿ ಯಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದು, ಅಲ್ಲಿಂದ ರಸ್ತೆ ಮೂಲಕ ಅವರು ಕ್ಯಾಂಫ್ಕೋ ದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಡಿಕೆ ಬೆಳೆಗಾರರ ಸಂಸ್ಥೆಯಾಗಿರುವ ಕ್ಯಾಂಫ್ಕೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇಶದ ಮೊದಲ ಕೇಂದ್ರ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಭೇಟಿ ಅಡಿಕೆ ಬೆಳೆಗಾರರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅಡಿಕೆಯ ಚುಕ್ಕಿ ಎಲೆ ರೋಗ, ಹಳದಿ ರೋಗ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಈ ಎಲ್ಲಾ ಸಂಕಷ್ಟಗಳಿರುವ ಸಮಯದಲ್ಲಿ ಕೇಂದ್ರ ಸಹಕಾರಿ ಸಚಿವರ ಭೇಟಿ ಅಡಿಕೆ ಬೆಳೆಗಾರನಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾವಿರಕ್ಕೂ ಮಿಕ್ಕಿದ ಪೊಲೀಸರನ್ನು ಅಮಿತ್ ಶಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ನಿಯೋಜನೆ ಮಾಡಲಾಗಿದೆ. ಬ್ಯಾನರ್, ಬಂಟಿಂಕ್ಸ್ ಮತ್ತು ಬಿಜೆಪಿ ಧ್ವಜಗಳು ಎಲ್ಲೆಗೆ ರಾರಾಜಿಸುತ್ತಿದ್ದು, ಬಿಜೆಪಿ ಪಕ್ಷಕ್ಕಂತು ಅಮಿತ್ ಶಾ ಭೇಟಿ ಹೊಸ ಹುರುಪನ್ನೂ ನೀಡಿದಂತಾಗಿದೆ.