ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಾಫ್ಟ್ವೇರ್ ಇಂಜಿನಿಯರ್ ಅರೆಸ್ಟ್!
ಬೆಂಗಳೂರಿನ ಥಣೀಸಂದ್ರದಲ್ಲಿ ಶಂಕಿತ ಉಗ್ರನನ್ನು ಐಎಸ್ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಆತನ ಹೆಸರು ಆರಿಫ್ ಎಂದಾಗಿದೆ. ಈತ ಆಲ್ ಖೈದಾ ಪರವಾಗಿದ್ದ, ಎಂಬ ಕೇಂದ್ರ ತನಿಖಾ ಸಂಸ್ಥೆಗಳ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶಂಕಿತ ಉಗ್ರ ಆರೀಫ್ ಉತ್ತರ ಪ್ರದೇಶ ಮೂಲದವನಾಗಿದ್ದು, ಥಣೀಸಂದ್ರದ ಮಂಜುನಾಥ ನಗರದಲ್ಲಿ ವಾಸಿಸುತ್ತಿದ್ದ. ಹಾಗೇ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿಯರ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವುದರ ಜೊತೆಗೆ ಆಲ್ಖೈದಾ ಜೊತೆ ಸಂಪರ್ಕ ಇಟ್ಟುಕೊಂಡಿದ್ದ, ಉಗ್ರರ ಪರವಾಗಿ ಕೆಲಸ ಮಾಡುತ್ತಿದ್ದ, ಈ ಬಗ್ಗೆ ರಾಜ್ಯದ ಆಂತರಿಕ ಗುಪ್ತಚರ ಪಡೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇದೀಗ ಈತನನ್ನು ಬಂಧಿಸಲಾಗಿದೆ.
ಬಂಧಿತ ಉಗ್ರ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದುಕೊಂಡು ಟೆಲಿಗ್ರಾಮ್ ಹಾಗೂ ಡಾರ್ಕ್ನೆಟ್ ಮೂಲಕ ಆಲ್ ಖೈದಾ ಜೊತೆ ಸಂಪರ್ಕದಲ್ಲಿದ್ದ. ಈ ಬಗ್ಗೆ ಮಾಹಿತಿಯನ್ನು ಗುಪ್ತಚರ ದಳ ಪತ್ತೆ ಮಾಡಿದ್ದು, ಈತ ಕಳೆದ ಎರಡು ವರ್ಷಗಳಿಂದ ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಅಲ್ಲದೆ, ಈತ ಈ ನಡುವೆ ಹಲವು ಬಾರಿ ಸಿರಿಯಾಗೆ ಹೋಗಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಐಎಸ್ಡಿ ಅಧಿಕಾರಿಗಳು ಆರೀಫ್ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.