7th Pay Commission : ಸರಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ – ಮನವಿ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಸರ್ಕಾರಿ ನೌಕರರ ಕೆಲಸದ ಬಗ್ಗೆ ಮನವಿ ಸಲ್ಲಿಸಿದ್ದು, ವಿವಿಧ ಬೇಡಿಕೆಯನ್ನೊಳಗೊಂಡ ಮನವಿಯನ್ನು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ಹಾಗೂ ಉಳಿದ ಎರಡು ದಿನ ರಜೆ ನೀಡುವಂತೆ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ಪದಾಧಿಕಾರಿಗಳ ನಿಯೋಗದ ವತಿಯಿಂದ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೆ, ಕೆಲಸ ಅವಧಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಕೂಡ ಬೇಡಿಕೆ ಸಲ್ಲಿಸಿದ್ದಾರೆ. ಕೆಲಸದ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಇದ್ದು, ಇದರ ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಅವಧಿಯನ್ನು ಬದಲಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಇದಿಷ್ಟೇ ಅಲ್ಲದೆ, ನೌಕರರಲ್ಲಿ ದಕ್ಷತೆ, ನೈಪುಣ್ಯತೆ, ಕ್ರಿಯಾಶೀಲತೆ ಹೆಚ್ಚಳಕ್ಕೆ ತರಬೇತಿ ನೀಡಬೇಕು. ಮೂಲವೇತನಕ್ಕೆ ಶೇ. 31 ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ, ಶೇಕಡ 40ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು ಜಾರಿಗೆ ತರಬೇಕು. ಈ ಸೌಲಭ್ಯವನ್ನು 2022ರ ಜುಲೈ 1 ರಿಂದ ಜಾರಿಗೆ ತರಬೇಕು. ಹಾಗೇ ಕೇಂದ್ರ ಸರ್ಕಾರದ ಮಾದರಿಯಲ್ಲಿ 4 ವರ್ಷಕ್ಕೊಮ್ಮೆ ಎಲ್.ಟಿ.ಸಿ. ಸೌಲಭ್ಯ ನೀಡಬೇಕು ಎಂದಿದ್ದು, ಇನ್ನು ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ವಿವಾಹಿತ ಮಹಿಳಾ ನೌಕರರ ತಂದೆ, ತಾಯಿ ಸೇರಿಸಬೇಕು ಹೀಗೇ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.