ಬೆಚ್ಚಿಬೀಳಿಸಿದ್ದ ಪೆರ್ಲದ ನೀತು ಕೃಷ್ಣ ಕೊಲೆ ಪ್ರಕರಣ |ಬ್ರೇಸ್‌ಲೇಟ್‌ನ ಆಸೆಗಾಗಿ ಸ್ನೇಹಿತನಿಂದಲೇ ಕೊಲೆ

ಕಾಸರಗೋಡು : ಪೆರ್ಲ ಬಣ್ಪುತ್ತಡ್ಕ ಸಮೀಪ ಏಳ್ಕಾನ ಶೇಣಿ ಮಂಞಾರೆಯ ರಬ್ಬರ್‌ ತೋಟದ ಮನೆಯಲ್ಲಿ ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ (30)ಳನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ವಯನಾಡ್‌ ಮೇಪಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ತೃಕ್ಕೇಪಟ್ಟಮುಟ್ಟಿಲ್‌ ತಾಳುವಾರ ಮೂಲದ ಆ್ಯಂಟೋ ಸೆಬಾಸ್ಟಿನ್‌ (40)ನನ್ನು ಬಂಧಿಸಿರುವ ಪೊಲೀಸರು ಆತನನ್ನು ಕೊಲೆ ನಡೆದ ಏಳ್ಕಾನದ ಮನೆಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.

 

ಮೃತ ನೀತುಕೃಷ್ಣಳ ಚಿನ್ನದ ಬ್ರೆಸ್‌ಲೆಟ್‌ ಮೇಲೆ ಕಣ್ಣಿಟ್ಟಿದ್ದ ಆರೋಪಿ ಅನೇಕ ಬಾರಿ ಈ ವಿಚಾರವಾಗಿಯೇ ಜಗಳವಾಡಿದ್ದು ಇದೇ ಕಾರಣಕ್ಕೆ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಬದಿಯಡ್ಕ ಎಸ್‌ಐ ವಿನೋದ್‌ ಕುಮಾರ್‌ ಕೆ.ಪಿ. ನೇತೃತ್ವದ ವಿಶೇಷ ತನಿಖಾ ತಂಡ ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆತಂದು ಆರೋಪಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಕೊಲೆ ಮಾಡಿದ ನಂತರ ಎಸೆಯಲಾಗಿದ್ದ ಆರೋಪಿ ಧರಿಸಿದ್ದ ವಸ್ತ್ರ, ನೀತುಕೃಷ್ಣಳ ಬ್ಯಾಗ್‌, ವಸ್ತ್ರ, ಉಸಿರುಗಟ್ಟಿಸಿದ ಬಳಿಕ ಕುತ್ತಿಗೆ ಬಿಗಿಯಲು ಬಳಸಿದ ಬಟ್ಟೆ ತುಂಡು, ಬಾಯೊಳಗೆ ತುರುಕಿಸಿದ ಬಟ್ಟೆ, ಮೃತದೇಹವನ್ನು ಸುತ್ತಿಟ್ಟ ವಸ್ತ್ರ, ಆರೋಪಿಯ ಮೊಬೈಲ್‌ ಫೋನ್‌, ಕೊಲೆ ನಡೆಸಿದ ಬಳಿಕ ಆರೋಪಿ ಬಳಸಿದ್ದ ನೀತುಕೃಷ್ಣಳ ಫೋನ್‌, ಆರೋಪಿ ಖರೀದಿಸಿದ್ದ ಹೊಸ ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌, ಇಬ್ಬರ ಮೊಬೈಲ್‌ ಫೋನ್‌ ಮೊದಲಾದ ವಸ್ತುಗಳನ್ನು ಸಾಕ್ಷಿಯಾಗಿ ಸಂಗ್ರಹಿಸಲಾಗಿದೆ.

ನೀತುಕೃಷ್ಣಳ ಕೊಲೆ ಮಾಡಿದ ಬಳಿಕ ಆರೋಪಿ ಪೆರ್ಲದ ಖಾಸಗಿ ಹಣಕಾಸು ಸಂಸ್ಥೆಗೆ ಮಾರಾಟ ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಘಟನೆ !
ಜ. 27ರಂದು ಬೆಳಗ್ಗೆ ಆ್ಯಂಟೋ ಸೆಬಾಸ್ಟಿನ್‌ ಮತ್ತು ನೀತುಕೃಷ್ಣ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ನೀತು, ತಾನು ಕೊಲ್ಲಂಗೆ ಮರಳುವುದಾಗಿ ಹೇಳಿದಾಗ ಕೋಪಗೊಂಡ ಆರೋಪಿ ಆಕೆಯ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಜೀವನ್ಮರಣ ಹೋರಾಟದಲ್ಲಿಆಕೆ ತನ್ನ ಉಗುರಿನಿಂದ ಸೆಬಾಸ್ಟಿನ್‌ ದೇಹಕ್ಕೆ ಗೀರಿದ್ದಾಳೆ.

ಆತನ ಮೈಮೇಲೆ ಗೀರಿದ ಗಾಯಗಳು ಕಾಣಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನೀತುವಿನ ಸಾವು ಖಚಿತಪಡಿಸಲು ಆರೋಪಿ ಬಟ್ಟೆಯ ತುಂಡಿನಿಂದ ಕುತ್ತಿಗೆಗೆ ಬಿಗಿದಿದ್ದಾನೆ. ಸಾವು ಬಹುತೇಕ ಖಚಿತವಾದರೂ ಸಣ್ಣ ನರಳುವಿಕೆ ಶಬ್ದ ಕೇಳಿದಾಗ, ಆಕೆಯ ಬಾಯಿಗೆ ಬಟ್ಟೆ ತುರುಕಿ, ಮೇಲೆತ್ತಿ ನೆಲಕ್ಕೆಸೆದಿದ್ದಾನೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾದ ಸಾವಿಗೆ ಕಾರಣವಾದ ತಲೆಯ ಮಾರಣಾಂತಿಕ ಗಾಯ ಆಕೆಯನ್ನು ಗೋಡೆಗೆ ಬಡಿದ ಪರಿಣಾಮ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲ್ಲಂ ಕೊಟ್ಟಿಯಂನ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಕಾರ್ಮಿಕನಾಗಿ ದುಡಿಯತೊಡಗಿದ್ದ ಸೆಬಾಸ್ಟಿನ್‌ ರಬ್ಬರ್‌ ತೋಟದ ಮಾಲೀಕನ ಮನೆಯಿಂದ ಚಿನ್ನದ ಆಭರಣಗಳನ್ನು ಕಳವು ನಡೆಸಿ ಜೈಲು ಸೇರಿದ್ದ. ಆ ಬಳಿಕ ನೀತು ಆತನನ್ನು ದೂರ ಮಾಡಿದ್ದಳು. ಆದರೆ ಜಾಮೀನಿನಲ್ಲಿ ಬಿಡುಗಡೆಗೊಂಡ ಆತ ಮೆಸೆಂಜರ್‌ ಮೂಲಕ ಆಕೆಯನ್ನು ನಿರಂತರವಾಗಿ ಸಂಪರ್ಕಿಸಿ ಆಕೆಯ ಮನವೊಲಿಸಿ ಒಂದೂವರೆ ತಿಂಗಳ ಹಿಂದೆ ಏಳ್ಕಾನದ ರಬ್ಬರ್‌ ತೋಟದ ಮನಗೆ ಕರೆ ತಂದಿದ್ದ.
ವಿಪರೀತ ಕುಡಿತದ ಚಟ ಹೊಂದಿದ್ದ ಆರೋಪಿ ನೀತು ಧರಿಸಿದ್ದ ಚಿನ್ನದ ಬ್ರೆಸ್‌ಲೆಟ್‌ ಮೇಲೆ ಕಣ್ಣಿರಿಸಿದ್ದ. ಅದನ್ನು ತನಗೆ ನೀಡುವಂತೆ ಆಕೆಯಲ್ಲಿ ಹೇಳಿದ್ದು, ಈ ವಿಚಾರವಾಗಿ ಅವರಿಬ್ಬರ ಮಧ್ಯೆ ಪದೇ ಪದೇ ಜಗಳವಾಗಿ, ಕೊನೆಗೆ ಆಕೆಯನ್ನು ಕೊಂದು ಬ್ರೇಸ್‌ಲೆಟ್‌ನೊಂದಿಗೆ ಪರಾರಿಯಾಗಿದ್ದ.

Leave A Reply

Your email address will not be published.