ಮೊಬೈಲ್ ಬಳಕೆಯಿಂದ ದೃಷ್ಟಿಯನ್ನೇ ಕಳೆದುಕೊಂಡ ಮಹಿಳೆ | ಅತಿಯಾದ ಮೊಬೈಲ್ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗಿರಲಿ ಎಚ್ಚರಿಕೆ!
ಇಂದು ಮೊಬೈಲ್ ಬಳಸದ ಜನರಿಲ್ಲ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಎಷ್ಟು ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಮೊಬೈಲ್ ನಲ್ಲೆ ನೇತಾಡುತ್ತಿರುತ್ತಾರೆ. ಮನೋರಂಜನೆಗಳಿಗೆ ಮೊಬೈಲ್ ಬಳಕೆಯೇನೋ ಪ್ರಯೋಜನಕಾರಿ ಹೌದು. ಆದ್ರೆ, ಇದರ ಅತಿಯಾದ ಬಳಕೆ ಕಣ್ಣಿಗೆ ಹಾನಿಕಾರಕ.
ಹೌದು. ಇಲ್ಲೊಬ್ಬರು ಮಹಿಳೆ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣನೇ ಕಳೆದುಕೊಂಡಿದ್ದಾರೆ. ಅವರೇ 30 ವರ್ಷದ ಮಂಜು ಎಂಬ ಮಹಿಳೆ. ಇವರು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ನಲ್ಲಿ ಹೆಚ್ಚು ಗಂಟೆಗಳ ಕಾಲ ಕಳೆದ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಕುರುಡುತನದಿಂದ ಬಳಲಿದ್ದಾರಂತೆ. ಅದರ ಪರಿಣಾಮವಾಗಿ ಜೀವನವೇ ಕತ್ತಲೆಯ ಬದುಕಾಗಿದೆ.
ಮಂಜು ತನ್ನ ಸ್ಮಾರ್ಟ್‌ಫೋನ್ ನಲ್ಲಿ ಪ್ರತಿದಿನ ಹಲವಾರು ಗಂಟೆಗಳ ಕಾಲ ಬ್ರೌಸ್ ಮಾಡುವ ಹೊಸ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಕೋಣೆಯಲ್ಲಿರುವ ದೀಪಗಳನ್ನು ಆರಿಸಿ ಫೋನ್ ಬಳಸುತ್ತಿದ್ದರು. ಇದರ ಪರಿಣಾಮವಾಗಿ ಅವರು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (ಎಸ್‌ವಿಎಸ್) ನಿಂದ ಬಳಲುತ್ತಿದ್ದರು.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ವೈದ್ಯರು, ಕಂಪ್ಯೂಟರ್ ಗಳು, ಸ್ಮಾರ್ಟ್‌ಫೋನ್ ಗಳು ಅಥವಾ ಟ್ಯಾಬ್ಲೆಟ್ ಗಳಂತಹ ಸಾಧನಗಳ ದೀರ್ಘಕಾಲೀನ ಬಳಕೆಯು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್, ವಿವಿಧ ಕಣ್ಣು-ಸಂಬಂಧಿತ ನಿಷ್ಕ್ರಿಯಗೊಳಿಸುವ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಹೇಳಿದರು.
ರೋಗಲಕ್ಷಣಗಳನ್ನು ವಿವರಿಸಿದ ನರವಿಜ್ಞಾನಿ ಡಾ.ಸುಧೀರ್ ಕುಮಾರ್ ಅವರು, “ನಾನು ಅವರಿಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸಲಹೆ ನೀಡಿದೆ. ಬಳಿಕ ಒಂದು ತಿಂಗಳ ನಂತರ ಮಂಜು ಪರಿಶೀಲನೆಗೆ ಬಂದಾಗ ಸಂಪೂರ್ಣವಾಗಿ ಚೆನ್ನಾಗಿದ್ದರು ಎಂದು ಹೇಳಿದರು. ಆಕೆಯ 18 ತಿಂಗಳ ದೃಷ್ಟಿಹೀನತೆ ಸಂಪೂರ್ಣವಾಗಿ ವಾಸಿಯಾಗಿತ್ತು. ಈಗ, ಅವರು ಸಾಮಾನ್ಯ ಜನರಂತೆ ಎಲ್ಲವನ್ನೂ ನೋಡುವ ಸಾಮರ್ಥ್ಯವನ್ನು ಹೊಂದಿದ್ದರು. ಇದಲ್ಲದೆ, ರಾತ್ರಿ ಹೊತ್ತಿನಲ್ಲಿ ಅವರ ಕ್ಷಣಿಕ ದೃಷ್ಟಿ ನಷ್ಟವೂ ನಿಂತು ಹೋಯಿತು. ನಮ್ಮ ಅನುಮಾನ ಸರಿ ಎಂದು ಸಾಬೀತಾಗಿದೆ” ಎಂದು ವೈದ್ಯರು ಹೇಳಿದರು.
ಹೀಗಾಗಿ ಮೊಬೈಲ್ ಬಳಕೆದಾರರೇ ಡಿಜಿಟಲ್ ಸಾಧನಗಳ ಸ್ಕ್ರೀನ್ ಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ. ಇದರಿಂದ ನಿಮ್ಮ ಆನಂದಭರಿತ ಜೀವನದ ಜೊತೆ ನಿಮ್ಮ ಕಣ್ಣನ್ನೂ ಸುರಕ್ಷಿತವಾಗಿರಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಕಣ್ಣಿಗೂ ಆರಾಮವನ್ನು ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ.