ಕಬಡ್ಡಿ ಆಡುತ್ತಲೇ ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿ !
ಹೃದಯಾಘಾತ ಪ್ರಕರಣಗಳು ದೇಶಾದ್ಯಂತ ಹೆಚ್ಚಿದೆ. ಈ ಆಘಾತಕ್ಕೆ ಹಿರಿಯರು ಕಿರಿಯರು ಎನ್ನುವ ಲೆಕ್ಕವಿಲ್ಲ. ಶಾಲೆಗೆ ಹೋಗೋ ಮಕ್ಕಳಿಂದ ಹಿಡಿದು ಮುದಿ ಜೀವಗಳಿಗೂ ಇದು ಬಿಡದೆ ಕಾಡುತ್ತದೆ. ಈ ಆತಂಕದ ನಡುವೆ ಈ ಬಗ್ಗೆ ಯಾರೂ ಈ ರೀತಿ ಆಗಲು ಕಾರಣವೇನೆಂಬುದನ್ನು ಇಲ್ಲಿಯವರೆಗೆ ಅಧ್ಯಯನ ನಡೆಸಿಲ್ಲ. ಈ ಎಲ್ಲದರ ಜೊತೆ ಜೊತೆಗೆ ಹೃದಯಾಘಾತದಿಂದ ಉಂಟಾಗುವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಬಾಲಕಿಯೋರ್ವಳು ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನ ಅತ್ತಿಬೆಲೆಯಲ್ಲಿ ಈ ದುರಂತ ಘಟನೆ ನಡೆದಿದೆ. ಸಂಗೀತಾ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೊಳಗಾದ ಹುಡುಗಿ. ಧಾರವಾಡ ಮೂಲದ ಈ ವಿದ್ಯಾರ್ಥಿನಿ ಆನೇಕಲ್ ತಾಲೂಕಿನ ಬಳಗಾರನಹಳ್ಳಿಯ ನಿವಾಸಿ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನಲ್ಲಿ ನಿನ್ನೆ ಕ್ರೀಡಾ ಉತ್ಸವ ಇದ್ದ ಕಾರಣ ಮಹಿಳೆಯರ ಕಬಡ್ಡಿ ತಂಡವನ್ನು ಈಕೆ ಪ್ರತಿನಿಧಿಸುತ್ತಿದ್ದಳು. ಆದರೆ ಕಬಡ್ಡಿ ಆಡುವಾಗ ಹೃದಯಾಘಾತಕ್ಕೊಳಗಾದ ಈ ವಿದ್ಯಾರ್ಥಿನಿ ಕೂಡಲೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಸಾವಿಗೀಡಾಗಿದ್ದಾಳೆ. ಈ ಘಟನೆ ನಿನ್ನೆ ಸುಮಾರು ಐದು ಗಂಟೆಯ ಆಸುಪಾಸು ನಡೆದಿದೆ. ಹಾಗಾಗಿ ವಿದ್ಯಾರ್ಥಿನಿ ಮೃತಪಟ್ಟ ಕಾರಣ ಇಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.