ಶ್ರದ್ಧಾ ವಾಕರ್ ಹತ್ಯೆ ಪ್ರಕರಣ : ಬಯಲಾಯ್ತು ಚಾರ್ಜ್‌ಶೀಟಿನಲ್ಲಿ ಭಯಾನಕ ಮಾಹಿತಿ!
ಇಡೀ ಜಗತ್ತು ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ರೋಚಕ ಮಾಹಿತಿಯೊಂದು ಬಯಲಾಗಿದೆ. ಅಫ್ತಾಬ್ ತನ್ನ ‘ಲಿವ್-ಇನ್-ಪಾರ್ಟ್ನರ್’ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದು ಅಲ್ಲದೆ ಆಕೆಯ ದೇಹದ ಭಾಗಗಳನ್ನು ಶೇಖರಣೆ ಮಾಡಲು ಫ್ರಿಡ್ಜ್ ಖರೀದಿ ಮಾಡಿದ್ದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೆ ದೆಹಲಿ ಪೊಲೀಸರು 6,629 ಪುಟಗಳ ಚಾರ್ಜ್ ಶೀಟ್ ಅನ್ನು ಈತನ ವಿರುದ್ಧ ಸಾಕೇತ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಖಾಕಿ ಪಡೆಗೆ ಇದೀಗ ಬೆಚ್ಚಿ ಬೀಳಿಸುವ ಸಂಗತಿಯೊಂದು ಬಯಲಾಗಿದೆ.
ಈ ಮೊದಲು ಹೀನಾತಿ ಹೀನ ಪ್ರಕರಣ ಭೇದಿಸಿದ್ದರು ಸಹಿತ ಇಲ್ಲಿ ಆರೋಪಿ ಬಿಚ್ಚಿಡುತ್ತಿರುವ ಸತ್ಯಗಳು ಪೊಲೀಸರಲ್ಲಿ ನಡುಕ ಹುಟ್ಟಿಸಿದಂತು ಸ್ಪಷ್ಟ. ಸದ್ಯ ಆರೋಪಿ ಅಫ್ತಾಬ್ ನನ್ನು ನಾರ್ಕೋ ಮತ್ತು ಪಾಲಿಗ್ರಾಫಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ. ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಕೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಜಿಪಿಎಸ್ ಸ್ಥಳಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗಿದೆ.
ಇದೀಗ ಚಾರ್ಜ್ ಶೀಟ್ ನಲ್ಲಿ ಬಯಲಾಗಿರುವ ಮಾಹಿತಿ ಪ್ರಕಾರ, ಆರೋಪಿ ಅಫ್ಲಾಬ್ ಪೂನಾವಾಲಾ, ತನ್ನ ಗೆಳತಿ ಶ್ರದ್ಧಾ ವಾಕರ್ ಮೂಳೆಗಳನ್ನು ಗ್ರೈಂಡರ್ ನಲ್ಲಿ ಪುಡಿ ಮಾಡಿ, ಬಳಿಕ ಪುಡಿಯನ್ನು ವಿಲೇವಾರಿ ಮಾಡಿದ್ದಾನೆ. ಶ್ರದ್ಧಾ ಹತ್ಯೆ ಬಳಿಕ ಆತ ಎಸೆದ ಕೊನೆಯ ಭಾಗ ಆಕೆಯ ತಲೆಯಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಸಲ್ಲಿಸಿರುವ 6,600 ಪುಟಗಳ ಚಾರ್ಜ್ ಶೀಟ್ ನಲ್ಲಿ ಇಂತಹ ಭಯಾನಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಮೇ 18 ರಂದು ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ, ಆರೋಪಿಯು ಜೊಮಾಟೊ ಚಿಕನ್ ರೋಲ್ ಆರ್ಡರ್ ಮಾಡಿ ತಿಂದಿದ್ದನೆಂದು ಹೇಳಲಾಗಿದೆ. ಪೂನಾವಾಲ ಮೊದಲಿಗೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಪ್ಲಾನ್ ಹಾಕಿದ್ದ. ಅದಕ್ಕಾಗಿ ಅವನು ಒಂದು ಚೀಲವನ್ನು ಸಹ ಖರೀದಿಸಿದ್ದ. ಆದರೆ ತಕ್ಷಣ ಸಿಕ್ಕಿಬೀಳುತ್ತೇನೆಂದು ಭಾವಿಸಿ ಆ ಆಲೋಚನೆಯನ್ನು ಕೈಬಿಟ್ಟಿದ್ದಾಗಿ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ಅಂತಿಮವಾಗಿ ಅವನು ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ನಿರ್ಧರಿಸಿ ಅದಕ್ಕಾಗಿ ಬೇಕಾದ ಎಲ್ಲಾ ಸಲಕರಣೆಗಳನ್ನು ಗರಗಸ, ಸುತ್ತಿಗೆ ಮತ್ತು ಮೂರು ಚಾಕುಗಳನ್ನು ಖರೀದಿಸಿದ. ಹಾಗೂ ಬೆರಳುಗಳನ್ನು ಬೇರ್ಪಡಿಸಲು ಬ್ಲೊ ಟಾರ್ಚ್ ಅನ್ನು ಬಳಸಿದ್ದ ಎನ್ನಲಾಗಿದೆ. ಬಳಿಕ 35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್ ನಲ್ಲಿ ಇರಿಸಲಾಗಿತ್ತು. ಪೂನಾವಾಲಾನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್ ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಡುತ್ತಿದ್ದ ಎಂಬ ಆರೋಪವನ್ನು ಪಟ್ಟಿಯಲ್ಲಿ ತಿಳಿಸಲಾಗಿದೆ.
ಅಷ್ಟೇ ಅಲ್ಲದೆ, ಪೂನಾವಾಲಾ ಶ್ರದ್ಧಾ ವಾಲ್ಕರ್ ಅವರ ಮೊಬೈಲ್ ಅನ್ನು ಉಪಯೋಗಿಸುತ್ತಿದ್ದ. ಮೇ 18 ರ ನಂತರ ಆಕೆಯ ಖಾತೆಯು ಆತನ ಫೋನ್‌ನಿಂದ ಚಾಲನೆಯಾಗುತ್ತಿತ್ತು ಎಂದು ಗೂಗಲ್ ಡೇಟಾವು ಬಹಿರಂಗಪಡಿಸಿದೆ. ನಂತರ ಮುಂಬೈನಲ್ಲಿ ಆಕೆಯ ಸೆಲ್‌ಫೋನ್ ಮತ್ತು ಲಿಪ್‌ಸ್ಟಿಕ್ ಅನ್ನು ವಿಲೇವಾರಿ ಮಾಡಿದ್ದಾನೆ ಎಂಬುದಾಗಿ ಆರೋಪಪಟ್ಟಿಯು ಹೇಳುತ್ತದೆ.