ಸರಕಾರಿ ಜಮೀನು ಮಾರಾಟಕ್ಕೆ ಜಾಹಿರಾತು ನೀಡಿದ ಬಿಎಸ್‌ಎನ್‌ಎಲ್ | ತಹಶೀಲ್ದಾರ್‌ರಿಂದ ಬಿಎಸ್‌ಎನ್‌ಎಲ್‌ಗೆ ನೋಟಿಸ್
ಮಂಗಳೂರು : ಕದ್ರಿ ಗ್ರಾಮದಲ್ಲಿ ನೀಡಲಾಗಿರುವ 4.74 ಎಕರೆ ಜಮೀನನ್ನು ಮಾರಾಟ ಮಾಡಲು ಜಾಹೀರಾತು ನೀಡಿರುವ ಬಿಎಸ್ಎನ್‌ಎಲ್‌ಗೆ ಮಂಗಳೂರು ತಹಶೀಲ್ದಾರರು ನೋಟಿಸ್ ನೀಡಿದ್ದಾರೆ.
ಕದ್ರಿ ಗ್ರಾಮದ ಸರ್ವೆ ನಂಬ್ರ 57/1ಬಿ ರಲ್ಲಿ 2.84 ಎಕರೆ ಮತ್ತು 57/2ಬಿ2ರಲ್ಲಿ 1.90 ಎಕರೆ ಸರಕಾರಿ ಜಮೀನನ್ನು ಮಾರಾಟ ಮಾಡಲು ಭಾರತ್ ಸಂಚಾರಿ ನಿಗಮವು ಇತ್ತೀಚೆಗೆ ಜಾಹೀರಾತು ನೀಡಿತ್ತು.
ಈ ಬಗ್ಗೆ ಮಂಗಳೂರು ಎ ಹೋಬಳಿ ಕಂದಾಯ ನಿರೀಕ್ಷರ ವರದಿಯನ್ನು ಆಧರಿಸಿ ತಹಶೀಲ್ದಾರರು ಬಿಎಸ್‌ಎನ್‌ಎಲ್‌ನ ಜನರಲ್ ಮ್ಯಾನೇಜರ್‌ಗೆ ನೋಟಿಸ್ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಈ ಜಮೀನಿಗೆ ಬಿಎಸ್ಎನ್ಎಲ್ ಮಾಲಕರಾಗಿರುವುದಿಲ್ಲ. ಇದನ್ನು ಮಾರಾಟ ಮಾಡಲು ಅವಕಾಶವಿರುವುದಿಲ್ಲ ಎಂದು ತಹಶೀಲ್ದಾರರು ಸ್ಪಷ್ಟಪಡಿಸಿದ್ದಾರೆ.
ಬಿಎಸ್ಎನ್ಎಲ್ ಜಮೀನನ್ನು ಮಾರಾಟ ಮಾಡುವ ಬಗ್ಗೆ ಪತ್ರಿಕಾ ಪ್ರಕಟನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಸರಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ ಸಂಬಂಧ ಜಾಹೀರಾತು ನೀಡುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದು ತಹಹೀಲ್ದಾರರು ಜಾರಿ ಮಾಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಈ ಪತ್ರ ತಲುಪಿದ 3 ದಿನಗಳ ಒಳಗಾಗಿ ಯಾವ ಅಧಿಕಾರದ ಆಧಾರದ ಮೇರೆಗೆ ತಾವು ಜಮೀನುಗಳನ್ನು ಮಾರಾಟ ಸಂಬಂಧ ಜಾಹೀರಾತು ನೀಡಿರುತ್ತೀರಿ ಎಂಬ ಬಗ್ಗೆ ಸ್ಪಷ್ಟ ಸಮಜಾಯಿಷಿಯೊಂದಿಗೆ ಮಾಹಿತಿ ನೀಡಲು ಜನರಲ್ ಮ್ಯಾನೇಜರ್‌ಗೆ ತಹಶೀಲ್ದಾರರ ಸೂಚಿಸಿದ್ದಾರೆ. ಅಲ್ಲದೆ ಬಿಎಸ್‌ಎನ್‌ಎಲ್‌ನಿಂದ ನೀಡಿರುವ ಜಾಹೀರಾತನ್ನು ತಕ್ಷಣ ಹಿಂಪಡೆದು ಈ ಬಗ್ಗೆ ಪೂರಕ ವರದಿಯನ್ನು ಸಲ್ಲಿಸುವಂತೆಯೂ ತಿಳಿಸಿದ್ದಾರೆ.