ಬೆಳ್ತಂಗಡಿ : ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆ, ಹಲವು ಮಹಿಳೆಯರು ಭಾಗಿ ಶಂಕೆ!
ಕರಾವಳಿಯ ಕೆಲವೆಡೆ ಅನೈತಿಕ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂಬ ಆರೋಪ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದ್ದ ಕಾರಣ, ಬೆಳ್ತಂಗಡಿ ತಾಲೂಕಿನ ಉಜಿರೆಯ ಆಸುಪಾಸಿನಲ್ಲಿರುವ ಲಾಡ್ಜ್ ಗಳಲ್ಲಿ ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ನಿಖರ ಮಾಹಿತಿಯ ಅನುಸಾರ ಫೆ.6 ರಂದು ರಾತ್ರಿ ಇಪತ್ತಕ್ಕೂ ಹೆಚ್ಚು ಮಂದಿಯಿದ್ದ ಪೋಲಿಸ್ ತಂಡ ದಾಳಿ ನಡೆಸಿತ್ತು.
ಆದರೆ ಈಗ ಬಂದಿರೋ ವರದಿಯ ಪ್ರಕಾರ, ಇಂದು ಸಂಜೆ ಮತ್ತೆ ಉಜಿರೆಯ ಲಾಡ್ಜ್ ವೊಂದಕ್ಕೆ ಮತ್ತೊಮ್ಮೆ ಇತ್ತೀಚಿಗಷ್ಟೇ ನೇಮಕಗೊಂಡ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯವರ ಸಮ್ಮುಖದಲ್ಲಿ ರೈಡ್ ನಡೆದಿದ್ದು, ಅನೈತಿಕ ಚಟುವಟಿಕೆಯಲ್ಲಿ ಕೆಲವೊಂದು ಮಹಿಳೆಯರು ಭಾಗಿಯಾಗಿದ್ದಾರೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಲಾಡ್ಜ್ ಮೇಲೆ ಫೆ.7 ರಂದು ಸಂಜೆ ದಾಳಿ ವೇಳೆ ದಾಖಲೆಗಳಿಲ್ಲದೆ ರೂಂಗಳಲ್ಲಿ ಐದು ಮಂದಿ ಯುವತಿಯರು ಇದ್ದರು. ಅಲ್ಲಿಂದ ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ಮಾರ್ಗದರ್ಶನದ ಮೇರೆಗೆ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡಗಳು ಏಕಕಾಲದಲ್ಲಿ ಎಲ್ಲಾ ಲಾಡ್ಜ್ ಗಳ ಮೇಲೆ ದಾಳಿ ನಡೆಸಿದ್ದು ಈ ದಾಳಿಯ ಸಂದರ್ಭ 7 ಕ್ಕೂ ಅಧಿಕ ವಾಹನಗಳಲ್ಲಿ 20 ಕ್ಕೂ ಅಧಿಕ ಮಂದಿಯ ತಂಡ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.
ಉಜಿರೆಯ ಆಸುಪಾಸಿನ ಲಾಡ್ಜ್ ನಲ್ಲಿ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಅನುಮಾನದ ಜೊತೆಗೆ ಖಚಿತ ಮಾಹಿತಿಯ ಮೇರೆಗೆ ಲಾಡ್ಜ್ ಗಳ ರಿಜಿಸ್ಟರ್ ಗಳನ್ನು ಪರಿಶೀಲನೆ ನಡೆಸಿ ಆಧಾರ್ ಕಾರ್ಡ್ ಸಹಿತ ಇನ್ನಿತರ ಮೂಲ ದಾಖಲೆಗಳನ್ನು ಪೋಲಿಸ್ ತಂಡ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿತ್ತು. ಯಾವುದೇ ರೀತಿಯ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಇದಲ್ಲದೆ, ಮುಂದಿನ ದಿನಗಳಲ್ಲಿ ಲಾಡ್ಜ್ ನಲ್ಲಿ ತಂಗುವಂತಹ ಪ್ರವಾಸಿಗರ ಜೊತೆಗೆ ಭಕ್ತರ ಸಂಪೂರ್ಣ ಮಾಹಿತಿ ಪಡೆದ ಬಳಿಕವಷ್ಟೇ ರೂಮು ಒದಗಿಸಬೇಕು ಎಂದು ಬಂಟ್ವಾಳ ಪೊಲೀಸ್ ಅಧಿಕಾರಿಗಳ ತಂಡ ಎಚ್ಚರಿಕೆಯ ಸಂದೇಶ ನೀಡಿದರೂ ಎಗ್ಗಿಲ್ಲದೆ ಮತ್ತೆ ಅನೈತಿಕ ಚಟುವಟಿಕೆ ನಡೆದಿರುವುದು ಕಂಡರೆ ನಿಜಕ್ಕೂ ಕಾನೂನಿನ ಭಯವಿಲ್ಲವೇ ಎಂದೆನಿಸುವುದು ಸಹಜ.ಈ ಸಂಬಂಧ ಹೆಚ್ಚಿನ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.