ತನ್ನ ದೇಶದಲ್ಲಿ ಬೆತ್ತಲೆಯಾಗಿ ತಿರುಗೋದಕ್ಕೆ ಕೋರ್ಟಿನ ಅನುಮತಿ ತಂದ ಪುಣ್ಯಾತ್ಮ! ಈತನ ಬಗ್ಗೆ ತಿಳಿದ್ರೆ ನೀವು ಕೂಡ ಹುಬ್ಬೇರಿಸೋದು ಪಕ್ಕಾ!!
ಇಂದಿನ ಕಾಲದಲ್ಲಿ ಅರೆ ಬರೆ ಬಟ್ಟೆ ಹಾಕೊಂಡು ತಿರುಗಾಡಿದ್ರೆನೆ ಜನ ಬಾಯಿಗೆ ಬಂದಂತೆ ಮಾತನಾಡಿ ಕ್ಯಾಕರಿಸಿ ಉಗಿಯುತ್ತಾರೆ. ಇನ್ನು ಪೂರ್ತಿ ಬೆತ್ತಲೆಯಾಗಿ ಇಷ್ಟ ಬಂದಲ್ಲೆಲ್ಲ ಒಡಾಡಿದ್ರೆ ಸುಮ್ಮನೆ ಬಿಡ್ತಾರಾ? ಹಾಗೇನಾದ್ರೂ ಮಾಡಿದ್ರೆ ಅವರ ಕಥೆ ಏನಾಗ್ಬೋದು ಅಲ್ವಾ? ಎಲ್ಲರಿಂದ ಧರ್ಮದೇಟು ತಿಂದು, ಹುಚ್ಚ ಅಂತಲೋ, ಹುಚ್ಚಿ ಅಂತಲೋ ಪಟ್ಟದೊಂದಿಗೆ ಕಂಕನಾಡಿಯಂತಹ ಆಸ್ಪತ್ರೆಗೆ ಸಾಗಹಾಕ್ಬೋದು. ಆದ್ರೆ ಇಲ್ಲೊಬ್ಬ ಆಸಾಮಿಗೆ ಮೈಮೇಲೆ ತುಂಡು ಬಟ್ಟೆಯೂ ಇಲ್ಲದೆ ಬೆತ್ತಲೆಯಾಗಿ ಇರೋದಂದ್ರೆನೆ ಇಷ್ಟವಂತೆ. ಅಲ್ಲದೆ ವಿಚಿತ್ರ ಅನ್ನುವಂತೆ ನ್ಯಾಯಾಲಯವೇ ಆತನಿಗೆ ಬೆತ್ತಲೆಯಾಗಿ ಓಡಾಡಲು ಅನುಮತಿಯನ್ನು ಕೂಡ ನೀಡಿದೆ. ಅರೇ ಇದು ನಿಜಾನಾ? ಇಂತಹ ವಿಚಿತ್ರ ಮನಸ್ಥಿತಿಯ ಜನರೂ ಇರ್ತಾರಾ? ಯಾರಿವ ಬೆತ್ತಲೆ ಆಸಾಮಿ ಅನ್ನೋ ಎಂಬ ಪ್ರಶ್ನೆ ಕಾಡ್ತಿದಿಯಾ? ಹಾಗಾದ್ರೆ ಈ ಸ್ಟೋರಿ ನೋಡಿ.
ಇಂಥದ್ದೊಂದು ವಿಚಿತ್ರವಾದ ಘಟನೆ ನಡೆದಿರೋದು ಸ್ಪೇನ್ ದೇಶದಲ್ಲಿ! ಹೌದು, ಸ್ಪೇನ್ನ ವಾಲೆನ್ಸಿಯಾ ಪಟ್ಟಣದ ಬೀದಿಗಳಲ್ಲಿ 29 ವರ್ಷದ ಅಲೆಜಾಂಡ್ರೊ ಕೊಲೊಮರ್ ಎಂಬಾತ ಬೆತ್ತಲೆಯಾಗಿ ತಿರುಗಾಡುತ್ತಿದ್ದನು. ಹೀಗೆ ಬೀದಿ ಬೀದಿಯಲ್ಲಿ ಬೆತ್ತಲೆಯಾಗಿ ಓಡಾಡಿದ್ದಕ್ಕೆ ಈತನಿಗೆ ಸಾರ್ವಜನಿಕರು, ಛೀಮಾರಿ ಹಾಕಿ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆತನಿಗೆ ದಂಡವನ್ನೂ ಹಾಕಿದ್ದರು. ಕೊನೆಗೆ ಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಅಧೀನ ನ್ಯಾಯಾಲಯದವರೆಗೂ ಹೋಗಿತ್ತು. ಅಲ್ಲಿ ಆ ಬೆತ್ತಲೆ ಮನುಷ್ಯನಿಗೆ ಹಾಕಿದ್ದ ದಂಡವನ್ನು ರದ್ದುಮಾಡಲಾಯಿತು. ನಂತರ ಈ ಕೇಸ್ ಹೈಕೋರ್ಟಿನ ಮೊರೆ ಹೋಯಿತು.
ಹೌದು, ದಂಡವನ್ನು ರದ್ದುಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ವಾಲೆನ್ಸಿಯಾ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಮೇಲ್ಮನವಿಯನ್ನು ತಿರಸ್ಕರಿಸಿ, ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಬೆತ್ತಲೆ ಮಾನವನ ಮೇಲಿನ ದಂಡ ಪ್ರಕರಣವನ್ನು ರದ್ದುಗೊಳಿಸಿರುವ ಕೋರ್ಟ್, ಸಾರ್ವಜನಿಕ ನಗ್ನತೆಗೆ ಸಂಬಂಧಿಸಿದ ಅಥವಾ ಅದರ ವಿರೋಧಕ್ಕೆ ಅನ್ವಯವಾಗುವಂತಹ ಯಾವುದೇ ಕಾನೂನು ದೇಶದಲ್ಲಿ ಇಲ್ಲ ಎಂದು ಹೇಳಿದೆ. ಜೊತೆಗೆ 1988ರಿಂದ ಸ್ಪೇನ್ನಲ್ಲಿ ಸಾರ್ವಜನಿಕ ನಗ್ನತೆ ಕಾನೂನುಬದ್ಧವಾಗಿದೆ ಎಂದು ಹೇಳಿದೆ.
ವಿಚಾರಣೆ ವೇಳೆ ಈತನು ನನ್ನ ಮೇಲಿನ ದಂಡವು ತನ್ನ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ಕೋರ್ಟಿನಲ್ಲಿ ವಿಚಾರಣೆ ನಡೆಯುವಾಗ, ವಿಚಾರಣೆಗೆ ಹಾಜರಾಗುವಾಗಲೂ ಅಲೆಜಾಂಡ್ರೊ ಕೊಲೊಮರ್ ಕೇವಲ ಒಂದು ಜೊತೆ ಬೂಟ್ಸ್ ಬಿಟ್ಟರೆ ಬೇರೆನನ್ನೂ ಧರಿಸದೆ ಬೆತ್ತಲೆಯಾಗಿಯೇ ನ್ಯಾಯಲಯದ ಆವರಣಕ್ಕೆ ಎಂಟ್ರಿಕೊಟ್ಟಿದ್ದನು. ಆದರೆ, ಪೂರ್ತಿ ಬಟ್ಟೆ ಧರಿಸದೇ ಕೋರ್ಟ್ ಕಟ್ಟಡದ ಒಳಗೆ ಪ್ರವೇಶಿಸಿದಂತೆ ಅವನಿಗೆ ನಿರ್ಭಂದಿಸಲಾಯಿತು. ಬಳಿಕ ಕೋರ್ಟ್ ಆದೇಶಿಸಿದ ನಂತರ ಆತನ ವಿಚಾರಣೆಗೆ ಅವಕಾಶ ನೀಡಲಾಯಿತು.
ಈ ವಿಚಾರವಾಗಿ ತೀರ್ಪು ನೀಡಿದ ಹೈಕೋರ್ಟ್, ಸ್ಪೇನ್ನಲ್ಲಿ ಬೀದಿಯಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ಓಡಾಡಬಹುದು. ಅವರನ್ನು ಯಾರು ಕೂಡ ಬಂಧಿಸುವುದಿಲ್ಲ ಎಂದು ಹೇಳಿದೆ. ಆದರೆ, ವಲ್ಲಡೊಲಿಡ್ ಮತ್ತು ಬಾರ್ಸಿಲೋನಾದಲ್ಲಿ ನಗ್ನತೆಯನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೆ ತಂದಿದೆ. ಅಲ್ಡಯಾದಲ್ಲಿ ಮಾತ್ರ ನಗ್ನತೆಯನ್ನು ನಿಷೇಧಿಸುವ ಯಾವುದೇ ಕಾನೂನನ್ನು ಹೊಂದಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟೀಕರಿಸಿದೆ. ಇದರಿಂದ ಅಲ್ಡಯಾದ ಎರಡು ಬೀದಿಗಳಲ್ಲಿ ಬೇರೆ ಬೇರೆ ಸಮಯಗಳಲ್ಲಿ ಬೆತ್ತಲೆಯಾಗಿ ಓಡಾಡಲು ಅಲೆಜಾಂಡ್ರೋ ತನ್ನನ್ನು ಸೀಮಿತಗೊಳಿಸಿಕೊಂಡಿದ್ದಾನೆ ಮತ್ತು ಆತನ ನಡವಳಿಕೆಯು ನಾಗರಿಕ ಭದ್ರತೆ, ಶಾಂತಿ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಲೆಜಾಂಡ್ರೊ ಕೊಲೊಮರ್, 2020ರಿಂದ ನಾನು ಬೆತ್ತಲೆಯಾಗಿ ಓಡಾಡಲು ಶುರು ಮಾಡಿದೆ. ಅಂದಿನಿಂದ ಅವಮಾನಕ್ಕಿಂತಲೂ ಹೆಚ್ಚು ಬೆಂಬಲವನ್ನೇ ನಾನು ಸ್ವೀಕರಿಸಿದ್ದೇನೆ. ಆದರೆ, ಒಮ್ಮೆ ಮಾತ್ರ ಚಾಕುವಿನಿಂದ ಇರಿಯುತ್ತೇನೆ ಎಂಬ ಬೆದರಿಕೆಯನ್ನು ಅನುಭವಿಸಿದೆ. ಜೊತೆಗೆ ನನ್ನ ಮೇಲೆ ಅಶ್ಲೀಲ ಪ್ರದರ್ಶನದ ಆರೋಪ ಮಾಡಲಾಗಿದೆ. ಇದರೊಂದಿಗೆ ದಂಡವನ್ನೂ ವಿಧಿಸಿದ್ದರು. ಆದರೆ ನಾನು ಮಾಡುತ್ತಿರುವುದಕ್ಕೂ, ಅವರು ದಂಡ ವಿಧಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಂದು ಹೇಳಿಕೊಂಡಿದ್ದಾನೆ.