ಆನ್ಲೈನ್ ಬೆಟ್ಟಿಂಗ್ ಚಟ : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸ್ಟೇಬಲ್
ಉತ್ತರಕನ್ನಡ : ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಒಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯನ್ನುಉತ್ತರಕನ್ನಡ ಜಿಲ್ಲೆ ಕುಮಟಾ ಮೂಲದ ರಾಮ ಗೌಡ (32) ಎಂದು ಹೇಳಲಾಗಿದೆ.ಇವರು 2017ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದು, ಕಳೆದ 5 ವರ್ಷದಿಂದ ಕುಂದಾಪುರ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದರು.
ರಾಮ ಗೌಡ ಉತ್ತಮ ವಾಲಿಬಾಲ್ ಆಟಗಾರ ಆಗಿದ್ದು, ಆನ್ಲೈನ್ ಬೆಟ್ಟಿಂಗ್ ವಿಚಾರದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಕಳೆದ ನಾಲೈದು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಠಾಣೆಯ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಪತ್ತೆ ಮಾಡುವ ಕಾರ್ಯ ಕೂಡ ನಡೆಸಲಾಗಿತ್ತೆನ್ನಲಾಗಿದೆ. ಮಂಗಳವಾರ ಕಾನ್ ಸ್ಟೇಬಲ್
ಮೃತದೇಹ ಸಮುದ್ರ ತೀರದ ಪಾರ್ಕ್ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಮೀಪದಲ್ಲಿ ಬ್ಯಾಗ್ ಕೂಡ ದೊರೆತಿದೆ ಎನ್ನಲಾಗಿದೆ.
ಹೊನ್ನಾವರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.