ಕುಟುಂಬಸ್ಥರ ಎದುರೇ ಬಿಜೆಪಿ ಮುಖಂಡನ ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆಗೈದ ನಕ್ಸಲರು!
ಛತ್ತೀಸ್ಗಢದ ಬಿಜಾಪುರ ಗ್ರಾಮದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡರೊಬ್ಬರನ್ನು ಶಿರಚ್ಛೇದಗೊಳಿಸಿ ಬರ್ಬರವಾಗಿ ಕೊಲೆ ಮಾಡಿರುವ ರಕ್ಕಸ ಕೃತ್ಯ ಬೆಳಕಿಗೆ ಬಂದಿದೆ . ಹತ್ಯೆಯಾದವರನ್ನು ಇಲ್ಲಿನ ಉಸುರ್ ಮಂಡಲದ ಬಿಜೆಪಿ ಅಧ್ಯಕ್ಷ ನೀಲಕಂಠ ಕಕ್ಕೆಂ ಎಂದು ಗುರುತಿಸಲಾಗಿದೆ.
ಕಳೆದ 15 ವರ್ಷಗಳಿಂದ ಉಸುರ್ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ನೀಲಕಂಠ ಕಕ್ಕೆಂ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ತಮ್ಮ ಅತ್ತಿಗೆ ಮದುವೆ ಸಮಾರಂಭಕ್ಕೆಂದು ಸ್ವಗ್ರಾಮ ಆವಪಲ್ಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ನಕ್ಸಲರು ಬಂದು ನೀಲಕಂಠ ಕಕ್ಕೆಂ ಮೇಲೆ ದಾಳಿ ಮಾಡಿದ್ದಾರೆ. ಕುಟುಂಬದವರ ಎದುರೇ ನೀಲಕಂಠ ಕಕ್ಕೆಂ ಅವರ ತಲೆಯನ್ನು ಕಡಿದು ನಕ್ಸಲರು ಹತ್ಯೆ ಮಾಡಿದ್ದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹತ್ಯೆಯ ನಂತರ ನಕ್ಸಲೀಯರು ಕರಪತ್ರಗಳನ್ನು ಎಸೆದಿದ್ದಾರೆ. ಈ ಹಿಂದೆಯೂ ನಕ್ಸಲೀಯರು ನೀಲಕಂಠ ಕಕ್ಕೆಂ ಅವರಿಗೆ ಎಚ್ಚರಿಕೆ ನೀಡಿದ್ದರು ಹೇಳಲಾಗುತ್ತಿದೆ. ಆದರೀಗ ಗ್ರಾಮಕ್ಕೆ ನೀಲಕಂಠ ಆಗಮಿಸಿದ ವಿಷಯ ತಿಳಿದು ಹತ್ಯೆಗೆ ಯೋಜನೆ ರೂಪಿಸಿದ್ದರು. ನೀಲಕಂಠ ಅವರನ್ನು ಮನೆಯಿಂದ ಹೊರಗೆ ತಂದು ಕೊಡಲಿ ಮತ್ತು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದಿಂದ ಇಡೀ ಆವಪಲ್ಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ನಕ್ಸಲರ ಈ ಕೃತ್ಯದ ಬಗ್ಗೆ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನೀಲಕಂಠ ಕಕ್ಕೆಮ್ ಅವರ ಸಾವು ಬಿಜೆಪಿಗೆ ಆಘಾತ ಉಂಟು ಮಾಡಿದೆ. ಕಳೆದ 30 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಬಿಜಾಪುರ ಪ್ರದೇಶದಲ್ಲಿ ಇವರಿಗೆ ಹೆಚ್ಚಿನ ಪ್ರಾಬಲ್ಯವಿತ್ತು. ಅವರು ಮಾವೋವಾದಿಗಳಿಂದ ಅತಿ ಹೆಚ್ಚು ಬಾಧಿತ ಗ್ರಾಮವಾದ ಪೆಂಕ್ರಾಮ್‌ಗೆ ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕಾರಿಗಳು ಯಾವುದೇ ಪ್ರತ್ರಿಯೆ ನೀಡಿಲ್ಲ. ಅದೇ ರೀತಿಯಾಗಿ ಈ ಹತ್ಯೆಯ ಹೊಣೆಯನ್ನು ಮಾವೋವಾದಿಗಳು ಕೂಡ ತೆಗೆದುಕೊಳ್ಳುತ್ತಿಲ್ಲ.