ನಿಗೂಢವಾಗುಳಿದ ಮಂಗಳೂರು ಜುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ | ಪಾತಕ ಲೋಕಕ್ಕೆ ಸಿಂಹಸ್ವಪ್ನವಾಗಿರುವ ಮಂಗಳೂರು ಪೊಲೀಸರಿಗೆ ಈ ಕೃತ್ಯ ಸವಾಲಾಗಿದ್ದೇಕೆ ?!

ಮಂಗಳೂರು: ಕರಾವಳಿ ಪ್ರದೇಶವಾದ ಮಂಗಳೂರಿಗೆ ರಕ್ತ ಸಿಕ್ತ ಇತಿಹಾಸವಿದೆ ಎನ್ನುವುದಕ್ಕೆ ಹಲವು ವರ್ಷಗಳ ಹಿಂದಿನ ಹಾಗೂ ಇಂದಿನ ಹಲವು ಕೊಲೆ, ಹಲ್ಲೆ, ಜೀವ ಬೆದರಿಕೆ ಹೀಗೆ ಹತ್ತು ಹಲವು ಪ್ರಕರಣಗಳೇ ಸಾಕ್ಷಿ. ಅತ್ತ ಬೋಳಾರದಿಂದ ಹಿಡಿದು ಕದ್ರಿ, ಬಲ್ಲಾಳ್ ಬಾಗ್, ಬಜಿಲಕೇರಿ, ಎಕ್ಕೂರು, ವಾಮಂಜೂರು, ಮೂಲ್ಕಿ,ಕೋಡಿಕೆರೆ, ಬರ್ಕೆ ಹೀಗೆ ಕ್ರೈಂ ಲೋಕದಲ್ಲಿನ ಈ ಹೆಸರುಗಳು ಅಂದಿನ ಕಾಲಕ್ಕೆ ಚಿರಪರಿಚಿತವಾಗಿದ್ದವು. ಇಂತಹಾ ಪ್ರಕರಣಗಳು ಹೆಚ್ಚುತ್ತಿದ್ದಂತೆ ಪೊಲೀಸರು ತೊಡಿಸುವ ಕೋಳ-ಲಾಠಿಯ ಪಾಠಕ್ಕೆ ಸದ್ದು ಸುದ್ದಿ ಇಲ್ಲದಂತಾಗಿದೆ. ಇಂತಹ ಘಟಾನುಘಟಿ, ಪಾತಕಿಗಳನ್ನು ಕಂಬಿ ಹಿಂದೆ ತಳ್ಳಿದ ಪೊಲೀಸ್ ಇಲಾಖೆಗೆ ಈ ಒಂದು ‘ ಸಣ್ಣ ‘ ಎನ್ನಿಸುವ ಪ್ರಕರಣ ಸವಾಲಾಗಿ ಪರಿಣಮಿಸಿದ್ದು ಹೇಗೆ ಎನ್ನುವುದು ಪ್ರಶ್ನೆಯಾಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.

ಕಳೆದ ಒಂದೆರಡು ದಿನಗಳ ಹಿಂದೆ ಮಂಗಳೂರು ನಗರದ ಹಂಪನಕಟ್ಟೆ ಬಳಿಯ ಉಷಾ ಲಾಡ್ಜ್-ಉಷಾ ಜುವೆಲ್ಲರ್ಸ್ ಪಕ್ಕದಲ್ಲೇ ಇರುವ ಮ್ಯಾಂಗಲೋರ್ ಜುವೆಲ್ಲರ್ ನೌಕರ ರಾಘವ ಆಚಾರಿ(50) ಎಂಬವರ ಹತ್ಯೆ ನಡೆದಿದ್ದು, ಹತ್ಯೆಯ ಬಳಿಕ ನಗರ ಪೊಲೀಸ್ ಆಯುಕ್ತರು ತನಿಖೆಗೆ ತಂಡಗಳನ್ನು ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆದರೆ ಘಟನೆ ನಡೆದು ಎರಡು ದಿನಗಳೇ ಕಳೆದರೂ ಪ್ರಕರಣದ ಆರೋಪಿಗಳ ಯಾವುದೇ ಸುಳಿವು ಸಿಗದಿರುವುದು ಹಾಗೂ ಈವರೆಗೂ ಆರೋಪಿಗಳ ದಸ್ತಗಿರಿ ಮಾಡದಿರುವುದು ಆಶ್ಚರ್ಯ ಮೂಡಿಸಿದೆ. ಜತೆಗೆ ಹಲವು ಅನುಮಾನಗಳ ಜೊತೆಗೆ ನಗರದ ಇನ್ನಷ್ಟು ಜುವೆಲ್ಲರಿ ಮಾಲಕರಲ್ಲಿ ಒಂದು ತೆರನಾದ ಆತಂಕ ಮೂಡಿಸಿದೆ.

ಅವತ್ತು ಜುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿತ ಸಂಭವಿಸಿತ್ತು. ಚೂರಿ ಇರಿತ ಹಾಗೂ ಕೊಲೆ ಪ್ರಕರಣ ಅರೆ ಕ್ಷಣ ನಗರವನ್ನೇ ಬೆಚ್ಚಿಬೀಳಿಸಿದ್ದು, ಹೆಲ್ಮೆಟ್, ಮುಖ ಕವಚ ಧರಿಸಿ  ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದರು. ಪ್ರಾಥಮಿಕ ಹಂತದ ತನಿಖೆಯಲ್ಲಿ ಯಾವುದೇ ದರೋಡೆ ನಡೆದಿಲ್ಲ ಎನ್ನುವುದು ಖಚಿತವಾಗಿತ್ತು. ಇನ್ನೇನು ಪ್ರಕರಣ ಕೆಲವೇ ಗಂಟೆಗಳಲ್ಲಿ ಪತ್ತೆ ಆಗತ್ತೆ, ಆರೋಪಿಯನ್ನು ಸಿಟಿ ಲಿಮಿಟ್ ನಿಂದ ಹೊರಕ್ಕೆ ಹೋಗುವ ಮೊದಲು ಹಿಡಿದು ಹಾಕುತ್ತಾರೆ ಎನ್ನುವುದು ಮಂಗಳೂರು ಪೊಲೀಸರ ಮೇಲೆ ಜನರಿಗೆ ಇದ್ದ ಕಾನ್ಫಿಡೆನ್ಸ್.

ಆದ್ರೆ ಆ ಕಾನ್ಫಿಡೆನ್ಸ್ ಈಗ ಸಣ್ಣದಾಗಿ ಶೇಕ್ ಆಗಿದೆ. ಕಾರಣ, ಕೊಲೆ ನಡೆದು ಎರಡು ದಿನಗಳೇ ಕಳೆದರೂ ಆರೋಪಿಗಳ ಸುದ್ದಿ ಸಿಗುತ್ತಿಲ್ಲ. ವೈಯಕ್ತಿಕ ದ್ವೇಷ, ಆಮಿಷ, ಬೆದರಿಕೆ ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದರೂ ಆರೋಪಿಗಳ ಒಂಚೂರು ಖಚಿತ ಮಾಹಿತಿ ಬರುತ್ತಿಲ್ಲ.

ಮಂಗಳೂರು ನಗರ ಈ ಮೊದಲೇ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಗರದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ದಿನದ 24 ಗಂಟೆಯೂ ಕಣ್ಣು ತೆರೆದು ಕೂತಿದೆ. ಅಲ್ಲದೇ ಘಟನೆ ನಡೆದ ಸ್ಥಳಕ್ಕೂ 4-5 ಸಿಸಿ ಟಿವಿಗಳ ಸಂಪರ್ಕವಿದ್ದು, ಇಂಥದರಲ್ಲಿ ಹಾಡಹಗಲೇ ನಡೆದ ಭೀಕರ ಹತ್ಯೆಯ ಆರೋಪಿಗಳ ಸುಳಿವು ಸಿಕ್ಕಿಲ್ಲವೇ ಎನ್ನುವುದು ಜನತೆಯ ಪ್ರಶ್ನೆ.

ಕೃತ್ಯ ನಡೆಸಲು ಬಂದ ದುಷ್ಕರ್ಮಿಗಳು ಕೊಲೆ ಮಾಡಲು ಜ್ಯೋತಿ ಸರ್ಕಲ್ ಕಡೆಗೆ ಸಾಗಬೇಕು. ಅಥವಾ ಅವರು ಪಳ್ನೀರ್ ಕಡೆಯಿಂದ ಬಂದಿರಬಹುದು ಎನ್ನುವುದು ಒಂದು ಬಲವಾದ ಶಂಕೆ. ಎಲ್ಲಾ ಕಡೆಗಳಲ್ಲಿಯೂ ಸಿಸಿಟಿವಿ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಸ್ವಲ್ಪ ದೂರದವರೆಗೆ ಪೊಲೀಸರಿಗೆ ಸಿಸಿಟಿವಿ ಯ ಮೂಲಕ ಹೆಜ್ಜೆ ಜಾಡುಗಳು ಸಿಕ್ಕಿವೆ. ಆದರೆ ಆ ನಂತರ ಬ್ಲಾಕ್ ಆಗಿದೆ. ಅಲ್ಲಿಂದ ಸಿಸಿಟಿವಿ ಬಿಟ್ಟು ಇನ್ನಿತರ ಸಾಂದರ್ಭಿಕ ಸಾಕ್ಷಿ ಸನ್ನಿವೇಶಗಳನ್ನು ನಂಬಿಕೊಳ್ಳಬೇಕಾಗಿದೆ. ಅದಕ್ಕೇ ಹೇಳಿದ್ದು, ಮೊದಲಿಗೆ ಸಣ್ಣದೆಂದು ಅನ್ನಿಸಿಕೊಂಡಿದ್ದ ಈ ಕೇಸು ಈಗ ಪೊಲೀಸರಿಗೆ ಕಬ್ಬಿಣದ ಕಡಲೆ ಆಗಿರೋದು.

ಸದ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ ಪ್ರಕರಣ ಬಗ್ಗೆ ಮಾಹಿತಿ ನೀಡಿದ ಮೂಲಗಳು ಆರೋಪಿಗಳ ಪತ್ತೆಗೆ ರಚಿಸಿದ ತಂಡಗಳು ಹಲವು ಆಯಾಮಗಳ ತನಿಖೆ ನಡೆಸುತ್ತಿದ್ದು, ಕೆಲವೊಂದು ಸುಳಿವು ಪತ್ತೆಯಾಗಿದೆ. ಅಲ್ಲದೇ ಕೃತ್ಯ ಎಸಗಿದ್ದಾನೆ ಎನ್ನಲಾದ ಆರೋಪಿಯ ಮುಖ ಚಹರೆ ಸಿಸಿಟಿವಿ ಯಲ್ಲಿ ಪತ್ತೆಯಾಗಿದ್ದು,ಶೀಘ್ರ ಆರೋಪಿಗಳ ಬಂಧನವಾಗಲಿದ್ದು, ಬಂಧನದ ಬಳಿಕ ಕೊಲೆಗೆ ನಿಖರ ಕಾರಣ ತಿಳಿದುಬರಲಿದ್ದು, ನಗರದಲ್ಲಿ ಜನತೆ ಯಾವುದೇ ಭೀತಿಗೆ ಒಳಗಾಗುವುದು ಬೇಡ ಎಂದಿದೆ ಪೊಲೀಸ್ ಮೂಲಗಳು.ಆರೋಪಿಯ ಮುಖ ಚಹರೆ ಪತ್ತೆಯಾಗಿ ತನಿಖೆಯಲ್ಲಿ ಪ್ರಗತಿ ಕಂಡಿದ್ದು,ಇನ್ನು ಆರೋಪಿಯ ಬಂಧನ ಸಲೀಸಾಗಲಿದೆ ಹಾಗೂ ತನಿಖೆ ಒಂದು ತುದಿ ತಲುಪಲಿದೆ ಎನ್ನುವ ಆಶಾಭಾವನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Leave A Reply

Your email address will not be published.