ಮಂಗಳೂರು : ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ – ಓರ್ವ ವಶ
ಮಂಗಳೂರು: ಬಲ್ಮಠ-ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್‌ನ ಹಾಡಹಗಲೇ ಸಿಬ್ಬಂದಿಯೋರ್ವರನ್ನು ಮುಸುಕುಧಾರಿಯೊಬ್ಬ ಹತ್ಯೆಗೈದಿರುವ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಘಟನೆಯಲ್ಲಿ ರಾಘವೇಂದ್ರ ಆಚಾರ್ಯ ಎಂಬುವವರು ಸಾವಿಗೀಡಾಗಿದ್ದರು. ಈಗ ಈ ಪ್ರಕರಣಕ್ಕ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ಜುವೆಲ್ಲರಿ ಶಾಪ್ ನಲ್ಲಿ ರಾಘವೇಂದ್ರ ಆಚಾರ್ಯರು ಏಕಾಂಗಿಯಾಗಿದ್ದಾಗ ಆರೋಪಿಯು ಕೊಲೆಗೈದು ರಿಕ್ಷಾದಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ರಿಕ್ಷಾದ ನಂಬರ್ ಆಧರಿಸಿ ಪೊಲೀಸರು ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಘಟನೆ ವಿವರ : ಶುಕ್ರವಾರ ಸಂಜೆ 3.30ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಯೊಬ್ಬ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಕುಳಿತಿದ್ದ ರಾಘವ ಆಚಾರ್ಯ (50) ಎಂಬವರಿಗೆ ಚೂರಿಯಿಂದ ಇರಿದು ಹತ್ಯೆಗೈದಿದ್ದ. ಘಟನೆಯ ಸಂಪೂರ್ಣ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಜುವೆಲ್ಲರಿ ಮಾಲೀಕ ಕೇಶವ ಆಚಾರ್ಯ ಅವರು ಮಧ್ಯಾಹ್ನ ಊಟಕ್ಕೆ ತೆರಳಿದವರು ಸಂಜೆಯ ವೇಳೆಗೆ ಅಂಗಡಿಗೆ ಆಗಮಿಸಿದ್ದರು. ಅಂಗಡಿ ಮುಂಭಾಗ ಕಾರು ನಿಲ್ಲಿಸುವ ಜಾಗದಲ್ಲಿ ಬೈಕ್ ನಿಂತಿತ್ತು. ಇದು ಮಾಲೀಕನ ಗಮನಕ್ಕೆ ಬಂದಿದ್ದು, ಮಾಲೀಕ ಅಂಗಡಿ ಮುಂಭಾಗದಲ್ಲಿ ಬೈಕ್ ನಿಲ್ಲಿಸಿದೆ ಅದನ್ನು ತೆಗೆಯಿರಿ ಎಂದು ಹೇಳಲು ರಾಘವ ಆಚಾರ್ಯರಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ರಾಘವೇಂದ್ರ ಆಚಾರ್ಯರು ತನಗೆ ಯಾರೋ ಚೂರಿಯಿಂದ ಇರಿದಿದ್ದಾರೆ ಎಂದು ಹೇಳಿದ್ದಾರೆ.
ತಕ್ಷಣವೇ ಕೇಶವ ಆಚಾರ್ಯ ಗಾಬರಿಯಿಂದ ಅಂಗಡಿಗೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರ ಆಚಾರ್ಯರನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಅದೇ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಂದ ಪರಾರಿಯಾಗುತ್ತಿದ್ದ ಎನ್ನಲಾಗಿದೆ. ನಂತರ ತಕ್ಷಣವೇ ರಾಘವೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕೊಲೆ ಕೃತ್ಯ ನಡೆಯುವುದಕ್ಕಿಂತ ಸುಮಾರು 20 ನಿಮಿಷ ಮೊದಲೇ ಅಪರಿಚಿತ ವ್ಯಕ್ತಿ ಹೆಲ್ಮೆಟ್ ಧರಿಸಿ, ಮಾಸ್ಕ್ ಧರಿಸಿ ಅಲ್ಲಿಗೆ ಬಂದಿರುವುದು ಸ್ಪಷ್ಟವಾಗಿದೆ. ಕೇಶವ ಆಚಾರ್ಯ ಜುವೆಲ್ಲರಿ ಒಳಗೆ ಬರುವುದನ್ನು ಗಮನಿಸಿದ ಆರೋಪಿ ಚೂರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಚೂರಿ ಇರಿದಿರುವುದು ಮಾತ್ರವಲ್ಲದೆ, ಜುವೆಲ್ಲರಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಕೆಲವು ಚಿನ್ನಾಭರಣಗಳೂ ನಾಪತ್ತೆಯಾಗಿದೆ. ಅಂಗಡಿಯಲ್ಲಿ 16 ಗ್ರಾಂ ಚೈನ್ ಮತ್ತು ಉಂಗುರ ಕೊನೆಯದಾಗಿ ಬಿಲ್ ಆಗಿದ್ದು, ಪುಸ್ತಕದಲ್ಲೂ ಇದರ ಲೆಕ್ಕಾಚಾರ ಇದೆ. ಆದರೆ ಇದು ಆರ್ಡರ್ ಕೊಟ್ಟಿರುವುದೇ ಅಥವಾ ಬೇರೆಯೇ ಎಂಬುದು ಸ್ಪಷ್ಟವಾಗಿಲ್ಲ.