ರಾಜ್‍ಕುಮಾರ್ ನಟನೆಯ ‘ಹುಲಿಯ ಹಾಲಿನ ಮೇವು’ ಚಿತ್ರದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ? 3 ವಾರಕ್ಕೆ 17 ಲಕ್ಷ ಮಂದಿ ವೀಕ್ಷಿಸಿದ್ದ ಈ ಚಿತ್ರ, ಬರೆದ ದಾಖಲೆಯಾದ್ರೂ ಏನು?
ಸದ್ಯ ಭಾರತದಲ್ಲಿಂದು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಎಂಬಂತೆ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗ್ತಿವೆ. ಈಗಂತೂ ಸಿನಿಮಾ ರಿಲೀಸ್ ಆದ ಬಳಿಕ ಎಲ್ಲೆಲ್ಲೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದ್ದೇ ಸೌಂಡು. ಕೋಟಿ ಕೋಟಿ ಲೆಕ್ಕದಲ್ಲಿ ಸಿನಿಮಾಗಳು ಕಲೆಕ್ಷನ್ ಮಾಡುತ್ತಿವೆ. ಸ್ಟಾರ್ ಸಿನಿಮಾಗಳಂತೂ ಬಾಕ್ಸ್ ಆಫೀಸ್‌ನಲ್ಲಿ ದಿನಕ್ಕೊಂದು ರೆಕಾರ್ಡ್ ಸೃಷ್ಟಿಸುತ್ತಿವೆ. ಜೊತೆಗೆ ಹೊಸ ಇತಿಹಾಸ ಕ್ರಿಯೇಟ್ ಮಾಡುತ್ತಿವೆ. ಆದರಿಂದು ಬಾಕ್ಸ್ ಆಫೀಸ್ ಲೆಕ್ಕಾಚಾರ, ಗ್ರಾಸ್ ಕಲೆಕ್ಷನ್ ಹಾಗೂ ನೆಟ್ ಕಲೆಕ್ಷನ್ ಲೆಕ್ಕದ ಮೇಲೆ ನಿಂತಿದ್ದು, ಎಷ್ಟು ಮಂದಿ ಚಿತ್ರವನ್ನ ವೀಕ್ಷಿಸಿದ್ದಾರೆ ಎಂಬ ಲೆಕ್ಕವನ್ನ ಯಾರೂ ನೀಡಿಲ್ಲ. ಕೇವಲ ಗಳಿಕೆ ಬಗ್ಗೆ ಆಲೋಚನೆ ಮಾಡೋ ಹೆಚ್ಚಿನ ನಿರ್ದೇಶಕರು, ನಿರ್ಮಾಪಕರು ಸಿನಿಮಾ, ಜನರ ಮನಸ್ಸನ್ನು ಗೆದ್ದಿದೆಯೋ, ಇಲ್ಲವೋ ಎಂದು ಸ್ವಲ್ಪವೂ ಯೋಚಿಸಲ್ಲ.
ಈ ವಿಚಾರದ ಕುರಿತು ಸಿಂಹಾವಲೋಕನದಿಂದ ನೋಡಿದರೆ 1979 ರಲ್ಲೇ ಕನ್ನಡ ಚಿತ್ರವೊಂದು ಈ ಎಲ್ಲಾ ತರದ ಮಾಹಿತಿಯನ್ನು ಜನರಿಗೆ ನೀಡಿತ್ತು. ಸಿನಿಮಾ ಎಷ್ಟು ದಿನದಲ್ಲಿ
ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಎಷ್ಟು ಮಂದಿ ಚಿತ್ರವನ್ನ ವೀಕ್ಷಿಸಿದ್ದಾರೆ? ಒಟ್ಟಾರೆ ಕಲೆಕ್ಷನ್ ಎಷ್ಟಾಗಿದೆ? ಎಂಬ ಪಿನ್ ಟು ಪಿನ್ ಲೆಕ್ಕವನ್ನ ಬಹಿರಂಗ ಪಡಿಸಿತ್ತು. ಹೌದು ನಮ್ಮ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿನಯಿಸಿದ್ದ ‘ಹುಲಿಯ ಹಾಲಿನ ಮೇವು’ ಚಿತ್ರತಂಡ ಆಗಿನ ಕಾಲದಲ್ಲೇ ಈ ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿತ್ತು. ಅಲ್ಲದೆ ಇದಕ್ಕೆ ಸಾಕ್ಷಿ ಎಂಬಂತೆ 1979 ರಲ್ಲಿನ ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದ ಪತ್ರಿಕಾ ವರದಿಯ ಫೋಟೋ ಕೂಡ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.
ವಿಜಯ್ ನಿರ್ದೇಶನದ, ಜಿ.ಕೆ.ವೆಂಕಟೇಶ್ ಸಂಗೀತದ, ಚಿ.ಉದಯ್ ಶಂಕರ್ ಅವರ ಸಾಹಿತ್ಯವಿರುವ, ರಾಜಣ್ಣ ಅವರ ಹುಲಿಯ ಹಾಲಿನ ಮೇವು ಸಿನಿಮಾ ಅಂದಿನ ಕಾಲದಲ್ಲಿ ಲಕ್ಷ ಲಕ್ಷ ಗಳಿಸಿತ್ತು. ಅದು ಮೂರೇ ವಾರದಲ್ಲಿ! ಕೇವಲ 3 ವಾರಗಳಲ್ಲಿ 40,49,733.23 ದಷ್ಟು ಗಳಿಕೆ ಮಾಡಿ ದಾಖಲೆ ಸೃಷ್ಟಿಸಿತ್ತು. ಕರ್ನಾಟಕದಲ್ಲಿ ಒಟ್ಟು 17,90,973 ಮಂದಿ ಈ ಚಿತ್ರವನ್ನು ವೀಕ್ಷಿಸಿದ್ದರು! ಎಂದು ವರದಿ ಹೇಳುತ್ತಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಶಿವಮೊಗ್ಗ ಸೇರಿದಂತೆ 20 ಕಡೆಯಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಸಂಖ್ಯೆ ಹಾಗೂ ಕಲೆಕ್ಷನ್ ಆದ ಮೊತ್ತದ ಸಂಪೂರ್ಣ ವಿವರ ಕೂಡ ಈ ವರದಿಯಲ್ಲಿದೆ.
ಇಂಟ್ರೆಸ್ಟಿಂಗ್ ಅಂದ್ರೆ, ಬೆಂಗಳೂರಿನಲ್ಲಿ 3 ವಾರಗಳಲ್ಲಿ 4,52,068 ಪ್ರೇಕ್ಷಕರು ಚಿತ್ರವನ್ನ ವೀಕ್ಷಿಸಿದ್ದು, ಅದರಿಂದ 14,86,759.95 ರೂಪಾಯಿ ಕಲೆಕ್ಷನ್ ಆಗಿತ್ತು. ಬೆಂಗಳೂರು ಬಿಟ್ಟರೆ ಹೆಚ್ಚಿನ ಕಲೆಕ್ಷನ್ ಮೈಸೂರು, ದಾವಣಗೆರೆ, ಹುಬ್ಬಳ್ಳಿಯಲ್ಲಾಗಿದೆ. ಒಟ್ಟಿನಲ್ಲಿ ‘ಹುಲಿಯ ಹಾಲಿನ ಮೇವು’ ಚಿತ್ರದ 3 ವಾರಗಳ ಕಲೆಕ್ಷನ್ ಅಂಕಿ ಅಂಶಗಳ ಎಲ್ಲಾ ಮಾಹಿತಿಗಳನ್ನು ಒಳಗೊಂಡ ವರದಿಯ ಅಪರೂಪದ ದಾಖಲೆ ಸೋಷಿಯಲ್ ಮೀಡಿಯಾದಲ್ಲಿಂದು ವೈರಲ್ ಆಗಿ ಸಿನಿರಸಿಕರನ್ನು ರಂಜಿಸಿದೆ.
ಈ ಹುಲಿಯ ಹಾಲಿನ ಮೇವು’ ಚಿತ್ರವು ಭಾರತೀ ಸುತ ಅವರ ಕಾದಂಬರಿ ಆಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಚೆಂಗುಮಣಿ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದರೆ, ನಟಿಯರಾಗಿ ಜಯಪ್ರದಾ, ಜಯಚಿತ್ರ ಅವರು ಸಾಥ್ ನೀಡಿದ್ದಾರೆ. ಜೊತೆಗೆ ಎಂ.ಪಿ.ಶಂಕರ್, ವಜ್ರಮುನಿ, ಶಕ್ತಿ ಪ್ರಸಾದ್, ತೂಗುದೀಪ ಶ್ರೀನಿವಾಸ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಇದು ಡಾ.ರಾಜ್ ಕುಮಾರ್ ಅವರಿಗೆ ಸಿನಮಾ ಸ್ಕೋಪ್ ತಂದು ಕೊಟ್ಟ ಮೊದಲ ಚಿತ್ರಕೂಡ ಇದಾಗಿದೆ.