ಕನ್ನಡ ಭುವನೇಶ್ವರಿ, ರಾಘವೇಂದ್ರ ಸ್ವಾಮಿಗಳ ಚಿತ್ರ ಸಹಿತ ಅನೇಕ ಕಲಾಕೃತಿಗಳಿಗೆ ಜೀವ ತುಂಬಿದ ಚಿತ್ರ ಮಾಂತ್ರಿಕ BKS ಇನ್ನಿಲ್ಲ!
ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿಯವರ ಚಿತ್ರ ಸೇರಿದಂತೆ ಅನೇಕ ಉತ್ತಮ ಚಿತ್ರಗಳನ್ನು ಹೊಸ ವಿನ್ಯಾಸದೊಂದಿಗೆ ರಚಿಸಿದ ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ. ಎಸ್. ವರ್ಮಾ ನಿಧನರಾಗಿದ್ದಾರೆ. ಆರೋಗ್ಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 8.20ಕ್ಕೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿ ಅವರ ಚಿತ್ರ ಸೇರಿದಂತೆ ಅನೇಕ ಉತ್ತಮ ಚಿತ್ರಗಳನ್ನು ಇವರು ರಚಿಸಿದ್ದಾರೆ. ಪರಿಸರ ಆಗೂ ಸಾಮಾಜಿಕ ಸಮಸ್ಯೆಗಳ ಪೇಂಟಿಂಗ್ ಮೂಲಕ ಜನರು ಮೆಚ್ಚುವಂತೆ ಅತ್ಯುತ್ತಮವಾಗಿ ಚಿತ್ರವನ್ನು ರಚಿಸುತ್ತಿದ್ದರು. ಇವರು ಪತ್ನಿ ಶಾಂತ ವರ್ಮಾ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.
76ರ ವಯಸ್ಸಿನ ವರ್ಮಾ ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಇಂದು ನಾವು ಸಭೆ ಸಮಾರಂಭಗಳಲ್ಲಿ ಪೂಜಿಸುವ ಭುವನೇಶ್ವರಿ ಚಿತ್ರ, ಮಂತ್ರಾಲಯದ ಪೂಜ್ಯ ರಾಘವೇಂದ್ರ ಸ್ವಾಮಿಗಳ ಚಿತ್ರ, ವೃಕ್ಷದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಪ್ರಸಿದ್ಧ ಚಿತ್ರಗಳು ಇವರ ಕುಂಚದಲ್ಲೇ ಮೂಡಿವೆ. ಹಲವು ಚಿತ್ರಗಳು ಇವರಿಗೆ ಹೆಚ್ಚೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿವೆ. ವರ್ಮಾ ಅವರ ಡಾ.ರಾಜ್‌ಕುಮಾರ್, ಕನ್ನಡಾಂಬೆ ಹಾಗೂ ರಾಘವೇಂದ್ರ ಸ್ವಾಮಿ ಅವರ ಕಲಾಕೃತಿಗಳು ಕನ್ನಡಿಗರ ಹೃದಯಲ್ಲ ಸದಾ ನೆಲೆಸಲಿದ್ದು, ಈ ಬಗ್ಗೆ ಸಾಕಷ್ಟು ಚರ್ಚಗಳೂ ಆಗಿದ್ದವು.
ಮೈಸೂರಿನ ರಾಜಾ ರವಿವರ್ಮಾ ಅವರ ಕಾಲಕೃತಿಗಳನ್ನು ಮೈಸೂರು ಅರಮನೆಯಲ್ಲಿ ವೀಕ್ಷಿಸುತ್ತಿದ್ದ ವರ್ಮಾ ಅವರು ವಿಪರೀತ ಪ್ರಭಾವಿತರಾಗಿ, ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ ಜೊತೆ ವರ್ಮಾ ಎಂಬ ಹೆಸರನ್ನೂ ಸೇರಿಸಿಕೊಂಡಿದ್ದರು. ಮೊದ ಮೊದಲು ತಮ್ಮ ಬೆರಳುಗಳನ್ನೇ ಬಳಸಿ ಚಿತ್ತಾರ ಸೃಷ್ಟಿಸುತ್ತಿದ್ದ ಈ ಕರ್ನಾಟಕದ ಮೇರು ಕಲಾವಿದ ನಂತರ ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕ ಕಲಾಕೃತಿಗಳನ್ನು ರಚಿಸುತ್ತಿದ್ದರು. ಅಲ್ಲದೆ ಕೆಲವೇ ನಿಮಿಷಗಳಲ್ಲಿ ಅತ್ಯುತ್ತಮವಾದ ಕಲಾಕೃತಿ ಸೃಷ್ಟಿಸಿಬಲ್ಲವರಾಗಿದ್ದ ಕಲಾವಿದ ಎಂಬ ಹೆಗ್ಗಳಿಕೆ ಕೂಡ ಇವರದ್ದು.
ಅಲ್ಲದೆ ಇವರು ರಚಿಸಿದ ತಾಯಿ ಭುವನೇಶ್ವರಿ ಚಿತ್ರವಂತೂ ನೋಡಲು ಎರಡು ಕಣ್ಣು ಸಾಲದು. ಆದರೆ ಈ ಚಿತ್ರವನ್ನು ರವಿವರ್ಮ ರಚಿಸಿದ್ದು ಎಂದು ಊಹಾಪೋಹಗಳು ಹರಿದಾಡಿದ್ದವು. ಇದರ ಕುರಿತು ಪ್ರತಿಕ್ರಿಯಿಸಿದ ಅವರು ‘ ಪ್ರತಿಯೊಬ್ಬ ಕಲಾವಿದನಿಗೆ ತಾನು ಮಾಡಿದ ಕೃತಿ ಎಲ್ಲರ ಗಮನಕ್ಕೆ ಬರಬೇಕು, ಎಲ್ಲರೂ ಅದನ್ನು ಕಂಡು ಹರ್ಷಿಸಬೇಕು ಎಂಬ ಮಹಾದಾಸೆ ಇರುತ್ತದೆ, ಅಂತೆಯೇ ತನ್ನ ಜೀವನದ ಪ್ರತಿಯೊಂದು ಕಲಿಕೆಯನ್ನ ಕಲಾಕೃತಿಯಲ್ಲಿ ಧಾರೆಯೆರೆಯುತ್ತ, ತಪಸ್ಸಿನಂತೆ ತೊಡಗಿಸಿಕೊಂಡು ಮಾಡಿದಂತ ಕಲಾಕೃತಿಯೇ ತಾಯಿ ಭುವನೇಶ್ವರಿ. ಇದು ನಾನು ರಚಿಸಿದ ಕಲಾಕೃತಿ ಎಂದು ಗುರುತಿಸುವುದು ಇರಲಿ, ಕೊನೆ ಪಕ್ಷ ಅದರ ಕರ್ತೃವಿನ ಹೆಸರನ್ನು ನಮೂದಿಸದೇ, ಪ್ರಕಟಿಸುವುದೇ? ಹೆಸರನ್ನು ನಮೂದಿಸುವುದರ ಬಗ್ಗೆ ಕೇಳಿದಾಗ ‘ನೀವೇ ಇದನ್ನು ರಚಿಸಿದ್ದೀರಾ ಎನ್ನುವುದಕ್ಕೆ ಪುರಾವೆ ಏನು ?’ ಎಂದು ಸಾಹಿತ್ಯ ಪರಿಷತ್ತಿನ ಅವಮಾನಿಸುವಂತ ಪ್ರಶ್ನೆಗೆ ನಾನು ಏನು ಹೇಳಲಿ?
ಕರ್ನಾಟಕದ ಎಲ್ಲೆಡೆ ರಾರಾಜಿಸುವ ತಾಯಿ ಭುವನೇಶ್ವರಿಯನ್ನು ನನಗೇ ಉಡುಗೊರೆಯಾಗಿ ಕೊಡಲು ಬಂದವರು, ಅದು ರವಿವರ್ಮರ ಕೃತಿಯೆಂದು, ನಾನು ಮಾಡಿದ ಕಲಾಕೃತಿಯ ಬಗ್ಗೆ ನನಗೆ ಹೇಳಿದಾಗ, ಆಗುವಂತಹ ನೋವು ಮತ್ತ್ಯಾರಿಗೂ ಆಗದಿರಲಿ . ಗೀತೆ ಬರೆದವರು ರವೀಂದ್ರನಾಥ್ ಟಾಗೋರ್, ನಾಡ ಗೀತೆ ಬರೆದವರು ಕುವೆಂಪು, ನಾಡ ದೇವಿಯ ಚಿತ್ರ ಬರೆದವನು – ?’ ವಿಪರ್ಮಯಾಸವೇ ಸರಿ, ಎಂದು ಬೇಸರ ವ್ಯಕ್ತಪಡಿಸಿದ್ದರು.
ವರ್ಮಾ ಕಲೆಯನ್ನು ಅರಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅವರ ಸಾಧನೆಗೆ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು, ತಾಯಿ ಜಯಲಕ್ಷ್ಮೀ ಚಿತ್ರಕಲಾವಿದರು.