ಅನಾಥ ಶವಗಳ ತಾಣವಾಗಿ, ಡೆತ್ ಚೇಂಬರ್ ಆಗ್ತಿದೆ ಚಾರ್ಮಾಡಿ ಘಾಟ್! 2-3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಶವಗಳು ಪತ್ತೆ!!
ಚಾರ್ಮಾಡಿ ಘಾಟ್ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಕೃತಿ ಸೌಂದರ್ಯದ ರಮ್ಯ ರಮಣೀಯ ತಾಣವಾದ ಇದು ನಿಂತಲ್ಲೇ ಪ್ರವಾಸಿಗರನ್ನು ಕರಗಿಸಿಬಿಡುತ್ತದೆ. ಅಲ್ಲಿನ ತಣ್ಣಗಿನ ಗಾಳಿ, ಹಸಿರು ಪ್ರಪಂಚ ಎಂತವರನ್ನೂ ಮೈಮರೆಸುತ್ತದೆ. ಚಿಕ್ಕಮಗಳೂರು ಹಾಗೂ ದ.ಕ ಜಿಲ್ಲೆಗಳನ್ನು ಬೆಸೆಯುವ ಈ ರಸ್ತೆ ಯಲ್ಲಿ ಸಂಚರಿಸುವುದೇ ಒಂದು ರೋಚಕ ಅನುಭ. ಆದರಿಂದು ಈ ಚಾರ್ಮಾಡಿ ಘಾಟ್ ಅನೇಕ ನರಹಂತಕರ ಕೌತುಕಗಳಿಗೆ ಕಾರಣವಾಗಿ, ಡೆತ್ ಚೇಂಬರ್ ಆಗುತ್ತಿರುವುದು ದುರದೃಷ್ಟಕರ ಸಂಗತಿ.
ಹೌದು. ಚಾರ್ಮಾಡಿ ಘಾಟ್ ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಫೇವರೆಟ್ ಆಗಿಬಿಟ್ಟಿದೆ. ಅದು ಕೂಡ ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಮಧ್ಯೆ ಸಾವಿರಾರು ಅಡಿಯ ಕಂದಕವಿರೋದು ಕೊಲೆಗಡುಕರಿಗೆ ವರದಾನವಾಗಿದೆ. ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ವಾಹನಗಳನ್ನು ಚೆಕ್ ಮಾಡದಿರೋದು ಅವರಿಗೆ ಇನ್ನೂ ಹೆಚ್ಚಿನ ಅನುಕೂಲ. ಕಳೆದ 2-3 ವರ್ಷಗಳಲ್ಲಿ ಈ ಚಾರ್ಮಾಡಿ ಘಾಟಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಶವಗಳು ಪತ್ತೆ ಆಗಿವೆ.
ಈ ವಿಚಾರವೀಗ ಚಾರ್ಮಾಡಿ ಸುತ್ತ ಮುತ್ತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆತಂಕ ಮನೆ ಮಾಡಿದೆ. ಈ ಕುರಿತು ಮಾತನಾಡುವ ಅವರು, ಪೊಲೀಸರ ಗಮನಕ್ಕೂ ಬಾರದೇ ಇಲ್ಲಿ ಎಷ್ಟು ಹೆಣಗಳು ಕರಗಿವೆಯೋ ಅಥವಾ ಪ್ರಾಣಿಗಳಿಗೆ ಆಹಾರವಾಗಿವೆಯೋ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಇಲ್ಲಿ ಸಿಕ್ಕ ಶವಗಳಿಗಿಂತ ಮಣ್ಣಲ್ಲಿ ಕರಗಿದ ಶವಗಳೇ ಹೆಚ್ಚು ಎನ್ನುತ್ತಾರೆ. ಇದರಿಂದ ಎಚ್ಚೆತ್ತುಕೊಂಡ ಅವರೆಲ್ಲರೂ ಚಾರ್ಮಾಡಿಯ ಮಧ್ಯದಲ್ಲೇ ಸ್ಟೇಷನ್ ನಿರ್ಮಿಸಿ, ಪ್ರತಿಯೊಂದು ಗಾಡಿಯನ್ನ ಸಮಗ್ರವಾಗಿ ಚೆಕ್ ಮಾಡ್ಬೇಕೆಂದು ಆಗ್ರಹಿಸಿದ್ದಾರೆ.
9 ತಿಂಗಳ ಹಿಂದಿನ ಹೆಣ ಹುಡುಕಿಕೊಂಡು ಬಂದ ಬೆಂಗಳೂರು ಪೊಲೀಸರು ಮೂರು ದಿನ ಹುಡುಕಿ ಆಗಲ್ಲಪ್ಪಾ ಅಂತ ಬರಿಗೈಲಿ ವಾಪಸ್ ಹೋಗಿದ್ದಾರೆ. ಹಾಗಾಗಿ ಸ್ಥಳಿಯರು ಕೂಡ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ ಹಾಗೂ ಮೂಡಿಗೆರೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಬಂದೋಬಸ್ತ್ ಮಾಡಬೇಕು. ಪ್ರತಿಯೊಂದು ಗಾಡಿಯನ್ನೂ ಚೆಕ್ ಮಾಡ್ಬೇಕು. ರಾತ್ರಿ ವೇಳೆಯೂ ಚಾರ್ಮಾಡಿಯಲ್ಲಿ ಗಸ್ತು ತಿರುಗಬೇಕು. ಆಗ ಮಾತ್ರ ಇಂತಹ ಪ್ರಕರಣ ಕಂಟ್ರೋಲ್‍ಗೆ ಬರೋಕೆ ಸಾಧ್ಯ ಎಂದು ಹೇಳುತ್ತಾಲೆ.
ಚಾರ್ಮಾಡಿ ಅಂದರೆ ಅದೊಂದು ಸ್ವರ್ಗ ಎಂದು ಹೇಳ್ತಿದ್ದ ಜನರೀಗ, ಅಲ್ಲಿ ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ. ಪ್ರಾಣಿ, ಪಕ್ಷಿಗಳ ಕಲರವ, ಭೋರ್ಗರೆಯುತ್ತಾ ದುಮ್ಮುಕ್ಕುವ ಜಲಪಾತಗಳಿಂದ ತನ್ನ ಹಸಿರು ಸೌಂದರ್ಯವನ್ನು ಹೆಚ್ಚಿಸಿಕೊಂಡಿದ ಕಾನನವೀಗ ಹೆಣಗಳ ತಾಣವಾಗ್ತಿದೆ. ಕಳ್ಳ ಕಾಕರ ಕೂಪವಾಗ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಇದರ ಕುರಿತು ಕಾರ್ಯಪ್ರವೃತ್ತರಾಗಬೇಕು.