ಗೇಮ್ ಆಡಲು ಮಗನ ಕೈಗೆ ಮೊಬೈಲ್ ಕೊಟ್ಟು ಮಲಗಿದ ತಂದೆ! ಆಡುತ್ತಲೇ ಅಪ್ಪನ ಮೊಬೈಲ್​ನಿಂದ 80ಸಾವಿರ ವೆಚ್ಚದ ಫುಡ್​ ಆರ್ಡರ್ ಮಾಡಿದ ಮಗ!!

ಈಗಂತೂ ಚಿಕ್ಕ ಮಕ್ಕಳು ಕೈಯಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ. ಊಟ, ತಿಂಡಿ, ಆಟ ಎಲ್ಲವೂ ಮೊಬೈಲ್ ನೊಂದಿಗೇ ಆಗಬೇಕು. ಹೀಗೆ ಮಕ್ಕಳು ಮೊಬೈಲ್ ಹಿಡಿದು ಆಡುವಾಗ ಗೊತ್ತಿಲ್ಲದೆ ಏನನ್ನೋ ಒತ್ತಿ, ಯಾವುದ್ಯಾವುದೋ ಅಪ್ಲಿಕೇಶನ್ ಓಪನ್ ಆಗಿರುತ್ತವೆ. ಕೆಲವೊಮ್ಮೆ ಯಾರಿಗೋ ಕಾಲ್ ಹೋಗಿರತ್ತೆ, ಏನೇನೋ ಮೆಸೇಜ್ ಸೆಂಡ್ ಆಗಿರುತ್ತೆ ಇನ್ನು ಕೆಲವೊಮ್ಮೆ ವಿಚಿತ್ರವಾದ ಫೋಟೋಗಳು ಕ್ಲಿಕ್ ಆಗಿರುತ್ತೆ. ಒಟ್ನಲ್ಲಿ ಒಂದು ಮಾಡಲು ಹೋಗಿ ಇನ್ನೊಂದನ್ನು ಮಾಡಿಬಿಟ್ಟಿರುತ್ತಾರೆ. ಆದ್ರೆ ಇಲ್ಲೊಬ್ಬ ಸಣ್ಣ ಹುಡುಗ ಮೊಬೈಲ್ ನಿಂದ ಮಾಡಿದ ಅವಾಂತರ ಕೇಳಿದ್ರೆ ನೀವೇ ಗಾಬರಿ ಬೀಳ್ತೀರಾ! ಅಂತದ್ದೇನು ಮಾಡಿದ್ನಪ್ಪಾ ಅವ್ನು ಅನ್ಕೊಳ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಕೀಥ್​ ಸ್ಟೋನ್​ಹೌಸ್​ ಎಂಬ ವ್ಯಕ್ತಿ 6 ವರ್ಷದ ತನ್ನ ಮಗ ಚೇಸ್​ಗೆ ರಾತ್ರಿ ಹೊತ್ತು ಅರ್ಧ ಗಂಟೆಗಳ ಕಾಲ ಆಟವಾಡಲು ತನ್ನ ಮೊಬೈಲ್​ ನೀಡಿದ್ದ. ಆ ಪುಟ್ಟ ಹುಡುಗ ಹಾಗೆಯೇ ಮೊಬೈಲ್ ನಲ್ಲಿ ಆಟವಾಡುತ್ತಿದ್ದ. ಆದರೆ ಸ್ವಲ್ಪ ಹೊತ್ತಾದ ಮೇಲೆ ನೋಡಿದರೆ ಮೊಬೈಲ್ಗೆ Grubhubನಿಂದ ಸಾಕಷ್ಟು ಮೆಸೇಜ್​ಗಳು ಬಂದಿದ್ದವು. ನೀವು ಆರ್ಡರ್ ಮಾಡಿದ ಫುಡ್​ ಈಗ ದಾರಿಯಲ್ಲಿದೆ, ಸದ್ಯದಲ್ಲೇ ತಲುಪುತ್ತದೆ, ಇತ್ಯಾದಿಯಾಗಿ. ಡೆಲಿವರಿ ಬಾಯ್ ಬಂದು ಡೋರ್​ಬೆಲ್​ ಬಾರಿಸುವತನಕ ಇಲ್ಲೇನಾಗುತ್ತಿದೆ ಎಂದು ಈ ಕೀಥ್ ಗೆ ಗೊತ್ತೇ ಇಲ್ಲ. ಕೊನೆಗೆ ಡೋರ್ ತೆಗೆದು ನೋಡುವಾಗ ಟ್ರಕ್ ಗಟ್ಟಲೆ ತಿಂಡಿಗಳು ಮನೆಯ ಮುಂದಿದೆ! ಈಗಲಾದರೂ ನಿಮಗೆ ಗೊತ್ತಾಯ್ತಾ ಆ ಹುಡುಗ ಮೊಬೈಲ್ ನಲ್ಲಿ ಮಾಡಿದ್ದಾದರೂ ಏನೆಂದು?

ಹೌದು, ಆತ ಆಟವಾಡುತ್ತ ತನ್ನ ಅಪ್ಪನ ಮೊಬೈಲ್ನಲ್ಲಿ ಬರೋಬ್ಬರಿ 80 ಸಾವಿರ ರೂಪಾಯಿಗಳಷ್ಟು ಆನ್ಲೈನ್ ಫುಡ್ ಆರ್ಡರ್ ಮಾಡಿದ್ದಾನೆ! ಇದರ ಕುರಿತು ಆತನ ಅಪ್ಪ ಕೀಥ್ ಅವರೇ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದು, ‘ನಿನ್ನೆ ರಾತ್ರಿ ಡೆಲಿವರಿ ಡ್ರೈವರ್​ ನನ್ನ ಮನೆಗೆ ಬಂದು ಆರ್ಡರ್​ ಅನ್ನು ಮನೆಯ ಬಳಿ ಇಡಲು ಶುರುಮಾಡಿದ. ಆಗ ನನ್ನ ಪರಿಸ್ಥಿತಿ ಹೇಗಾಗಿರಬೇಡ ಊಹಿಸಿಕೊಳ್ಳಿ. ಟನ್​ಗಟ್ಟಲೆ ಫುಡ್​ ಪ್ಯಾಕ್​ಗಳನ್ನು ಡೆಲಿವರಿ ಏಜೆಂಟ್ ಇಡುತ್ತಲೇ ಹೋದ. ಸೀಗಡಿ ಪದಾರ್ಥ, ಸಲಾಡ್, ಚಿಲ್ಲಿ ಚೀಸ್​ ಫ್ರೈ, ಚಿಕನ್ ಪದಾರ್ಥ, ಸ್ಯಾಂಡ್​ವಿಚ್​, ಪಿಝಾ, ಎಲ್ಲಾ ಬಗೆಯ ಐಸ್​ಕ್ರೀಮ್​ಗಳು. ಇದ್ದಕ್ಕಿದ್ದಂತೆ ಟ್ರಕ್​ಗಟ್ಟಲೆ ಆಹಾರ ಪದಾರ್ಥಗಳನ್ನು ಮನೆಮುಂದೆ ಹೀಗೆ ತಂದು ಇಳಿಸಿದರೆ ನನಗೆ ಏನಾಗಬೇಡ? ಹೇಳಿ’ ಎಂದಿದ್ದಾನೆ.

ಈ ಮಗುವಿನ ತಂದೆಯೇ ಸೋಶಿಯಲ್​ ಮೀಡಿಯಾದಲ್ಲಿ ಈ ಘಟನೆಯ ಬಗ್ಗೆ ಬರೆದುಕೊಂಡಿದ್ರಿಂದ ಇದೀಗ ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನೋಡಿದ ನೆಟ್ಟಿಗರು ಕೆಲವರು ಗಾಬರಿಯಾಗಿದ್ದಾರೆ. ಇನ್ನೂ ಕೆಲವರು ನಗುತ್ತಿದ್ದಾರೆ. ಇದನ್ನು ಓದಿ ನನಗೆ ಈಗಲೂ ಭಯವಾಗುತ್ತಿದೆ ಎಂದು ಅನೇಕರು ಹೇಳಿದರೆ, ನಾನಂತೂ ಬಿದ್ದು ಬಿದ್ದು ನಗುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಸ್ನೇಹಿತರೇ ನೀವೂ ಕೂಡ ಮನೆಯಲ್ಲಿ ಮಕ್ಕಳ ಕೈಗೇನಾದರೂ ಹೀಗೆ ಮೊಬೈಲ್ ಕೊಟ್ಟು ಮೈಮರೆತು ಬಿಟ್ಟೀರಾ ಹುಶಾರ್! ಮತ್ತೆ ನಿಮ್ಮ ಮನೆ ಮುಂದೆಯೂ ಹೀಗೆ ಗಾಡಿಗಟ್ಟಲೆ ಫುಡ್ ಬಂದು ನಿಂತ್ರೆ ಭಾರೀ ಪಜೀತಿ ಆದೀತು.

Leave A Reply

Your email address will not be published.