ಮಂಗಳೂರು : ಭೀಕರ ಅಪಘಾತ ಪ್ರಕರಣ, ಇಬ್ಬರ ಸಾವು! Mad In Kudla ಖ್ಯಾತಿಯ ತುಳು ಸ್ಟ್ಯಾಂಡಪ್ ಕಾಮಿಡಿಯನ್ , ಯೂಟ್ಯೂಬರ್ ಅರ್ಪಿತ್ ಬಂಧನ !

Share the Article

ಮಂಗಳೂರು : ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಧ್ಯರಾತ್ರಿ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ನಡೆದಿರುವ ಘಟನೆ ವರದಿಯಾಗಿದ್ದು, ಈ ವೇಳೆ ಓರ್ವ ಗಂಭೀರ ಗಾಯಗೊಂಡಿದ್ದು ಅಲ್ಲದೇ, ಇನ್ನಿಬ್ಬರು ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ.

ಮಧ್ಯ ಪ್ರದೇಶದ ಇಂದೋರ್ ನಿಂದ ಕೇರಳ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು ಲಾರಿಯಲ್ಲಿದ್ದ ಮಧ್ಯ ಪ್ರದೇಶ ನಿವಾಸಿಗಳಾದ ಬಬುಲು(23), ಆಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿಅನೀಶ್(42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಕಾರ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಉಡುಪಿಯಿಂದ ಮಂಗಳೂರು ಕಡೆಗೆ ಅತೀ ವೇಗದಲ್ಲಿ ಬಂದ ಕಾರು ಹೆದ್ದಾರಿಯಲ್ಲಿ ಲಾರಿಯ ಟಯರ್ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಮೂವರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿತ್ತು ಎನ್ನಲಾಗಿದೆ.

ಅತಿ ವೇಗದಲ್ಲಿ ಬಂದ ಕಾರಿನ ರಭಸಕ್ಕೆ ಬಬುಲು ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬ ಅಚಲ್ ಎಂಬಾತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರ ಜೊತೆಗಿದ್ದ ಮತೊಬ್ಬ ಗಾಯಾಳು ಅನಿಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

ಮೂವರಿಗೆ ಡಿಕ್ಕಿ ಹೊಡೆದ ಕಾರು ಸ್ಥಳದಿಂದ ಪರಾರಿಯಾಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ, ಆರೋಪಿ ಕಾರು ಚಾಲಕ ತುಳು ಸ್ಟಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಹಳೆಯಂಗಡಿ ಇಂದ್ರನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು, ಈ ಪ್ರಕರಣದ ಕುರಿತಾಗಿ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply