ಜಮ್ಮು-ಕಾಶ್ಮೀರದಲ್ಲಿ ಬಿರುಕು ಬಿಡುತ್ತಿವೆ ಮನೆ, ರಸ್ತೆಗಳು! ಜೋಶಿಮಠದ ಬಳಿಕ ಕಾಶ್ಮೀರದಲ್ಲಿ ಮನೆ ಮಾಡಿದ ಆತಂಕ!
ಇತ್ತೀಚೆಗಷ್ಟೆ ಉತ್ತರಕಾಂಡದ ಜೋಶಿಮಠದಲ್ಲಿ ಮನೆಗಳು, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿತ್ತು. ಇದೀಗ ಈ ಘಟನೆ ಮಾಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲೂ ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು ಅನಾಹುತ ಎದುರಾಗುವ ಆತಂಕ ಮನೆ ಮಾಡಿದೆ.
ಕಳೆದ ತಿಂಗಳು ಉತ್ತರಾಖಂಡದ ಜೋಶಿಮಠದಲ್ಲಿ ಮನೆ ಹಾಗೂ ರಸ್ತೆಗಳು ಬಿರುಕು ಕಾಣಿಸಿಕೊಂಡಿತ್ತು. ಬಳಿಕ ಸರ್ಕಾರ ಪ್ರತಿ ಸಂತ್ರಸ್ತ ಕುಟುಂಬಳಿಗೆ 1.5 ಲಕ್ಷ ಪರಿಹಾರ ಘೋಷಣೆ ಮಾಡಿತು. ಈ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೋಶಿಮಠದಲ್ಲಿ ಆಗುತ್ತಿರುವ ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿ ಮುಂದೆ ಭೂಕುಸಿತ ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿತ್ತು.
ಆದರೀಗ ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಮನೆ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಇದರೊಂದಿಗೆ ಭೂಮಿ ಕುಸಿತವಾಗಿರುವುದೂ ಕಂಡುಬಂದಿದೆ. ಕಳೆದ ವರ್ಷ ಡಿಸೆಂಬರ್ ವೇಳೆ ಮನೆಯೊಂದರಲ್ಲಿ ಕಾಣಿಸಿಕೊಂಡ ಬಿರುಕುಗಳು ಈಗ ವ್ಯಾಪಿಸಲು ಪ್ರಾರಂಭಿಸಿದೆ ಎಂದು ದೋಡಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅಥರ್ ಅಮೀನ್ ಜರ್ಗರ್ ಹೇಳಿದ್ದಾರೆ.
ದೋಡಾ ಜಿಲ್ಲೆಯ ಮನೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದು ವ್ಯಾಪಿಸುತ್ತಿದ್ದು, ಎರಡು ದಿನಗಳಲ್ಲಿ 6 ಕಟ್ಟಡಗಳು ಬಿರುಕು ಬಿಟ್ಟಿವೆ. ಈ ಬಿರುಕುಗಳನ್ನು ಸರಿಪಡಿಸಿದ ಪ್ರದೇಶಗಳಲ್ಲಿ ಕೆಲ ಭಾಗಗಳು ಮುಳುಗಡೆಯಾಗುವ ಆತಂಕ ಶುರುವಾಗಿದೆ ಎಂದು ಜರ್ಗರ್ ಹೇಳಿದರು. ಫೆ.3ರಂದು ಪ್ರಾಥಮಿಕ ಮೌಲ್ಯಮಾಪನ ಮಾಡಲಾಗಿದ್ದು, ಭೂವಿಜ್ಞಾನಿಗಳು ಪ್ರದೇಶಕ್ಕೆ ಭೇಟಿ ಪರಿಶೀಲಿಸುತ್ತಿದ್ದಾರೆ.