ಮುಂಬೈನಲ್ಲಿ ಉಗ್ರ ದಾಳಿ ನಡೆಸುವುದಾಗಿ ಪೋಲಿಸರಿಗೆ ಬಂತು ಬೆದರಿಕೆಯ ಇಮೇಲ್! ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಿದ ಸರ್ಕಾರ!!
ಇತ್ತೀಚೆಗಂತೂ ದೇಶದಲ್ಲಿ ಭಯೋತ್ಪಾದಕಾ ಚಟುವಟಿಕೆಗಳು ತುಂಬಾನೇ ಹೆಚ್ಚುತ್ತಿದ್ದು, ಜನರನ್ನು ಸಾಕಷ್ಟು ಭಯಭೀತರನ್ನಾಗಿ ಮಾಡುತ್ತಿವೆ. ಅಲ್ಲದೆ ತಾವು ದಾಳಿ ಮಾಡುವುದಾಗಿ ಮುಂಚಿತವಾಗೇ ತಿಳಿಸಿ, ದಾಳಿ ನಡೆದಿದೆಯೇನೋ ಎಂಬಂತೆ ಭಯವನ್ನು ಹುಟ್ಟಿಸುವ ಚಾಳಿಯನ್ನೂ ಈ ನೀಚರು ಬೆಳೆಸಿಕೊಂಡಿದ್ದಾರೆ. ಕೆಲವು ಉಗ್ರ ಸಂಘಟನೆಗಳಿಗೆ ಇದೊಂದು ಹುಡುಗಾಟಿಕಯಂತೆ ಪರಿಣಮಿಸಿದೆ. ಇದೀಗ ಇಂತಹದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಪರಿಚಿತ ವ್ಯಕ್ತಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲ್ ಬಂದಿದೆ.
ಬೆದರಿಕೆ ಮೇಲ್ ಕಳುಹಿಸಿದ ವ್ಯಕ್ತಿ ತಾನು ತಾಲಿಬಾನಿ ಎಂದು ಹೇಳಿಕೊಂಡಿದ್ದು, ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು, ಆತ ಹೇಳಿರುವುದಾಗಿ ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಮುಂಬೈ ಪೊಲೀಸರೊಂದಿಗೆ ಎನ್‌ಐಎ ಜಂಟಿ ತನಿಖೆಯನ್ನು ಪ್ರಾರಂಭಿಸಿದೆ. ಮೇಲ್ ಕಳುಹಿಸಿದ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಈ ವಿಚಾರದೊಂದಿಗೆ ಹಲವಾರು ಇಂತಹದೇ ಪ್ರಕರಣಗಳನ್ನು ತೆರೆದಿಟ್ಟ ಪೋಲೀಸರು ‘ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ವಿವಿಧೆಡೆ ಬಾಂಬ್‌ಗಳನ್ನು ಇರಿಸಿರುವುದಾಗಿ ಇದೇ ರೀತಿಯ ಮತ್ತೊಂದು ಕರೆ ಬಂದಿತ್ತು ಎಂದು ಹೇಳಿದ್ದಾರೆ. ಕರೆ ಮಾಡಿದಾತ ಇನ್ಫಿನಿಟಿ ಮಾಲ್ ಅಂಧೇರಿ, ಪಿವಿಆರ್ ಮಾಲ್ ಜುಹು ಮತ್ತು ಸಹಾರಾ ಹೋಟೆಲ್ ಏರ್‌ಪೋರ್ಟ್‌ನಲ್ಲಿ ಮೂರು ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಹೇಳಿದ್ದ. ಹೀಗಾಗಿ ಮುಂಬೈ ಪೊಲೀಸರು ಉದ್ದೇಶಿತ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದಿದ್ದಾರೆ.
ಅಲ್ಲದೆ ಜನವರಿಯಲ್ಲಿ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಇಂತದೇ ಒಂದು ಬೆದರಿಕೆ ಕರೆ ಬಂದಿತ್ತು, ಅದರಲ್ಲಿ ಅಪರಿಚಿತನೊಬ್ಬ ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಕರೆ ಮಾಡಿದವ ಶಾಲೆಯಲ್ಲಿ ಟೈಮ್ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಹೀಗೇ ಅಪರಿಚಿತ ಕರೆ ಮಾಡಿ ಪದೇ ಪದೇ ಬೆದರಿಕೆ ಹಾಕುವವರ ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲಿ ಎಲ್ಲರನ್ನೂ ಬಂಧಿಸುತ್ತೇವೆ ಎಂದಿದ್ದಾರೆ.