ಮೂಡುಬಿದಿರೆ : ಟಿಪ್ಪರ್ ಚಾಲಕನೋರ್ವನ ವೇಗದ ಚಾಲನೆ | ಪ್ರಶ್ನೆ ಮಾಡಿದ ವ್ಯಕ್ತಿಯ ಭೀಕರ ಕೊಲೆ, ಸ್ಥಳಕ್ಕೆ ಪೊಲೀಸರ ದೌಡು
ಮಂಗಳೂರು: ಇತ್ತೀಚೆಗೆ ಅತೀವೇಗದ ಚಾಲನೆ ಮಾಡೋ ಚಾಲಕರ ಸಂಖ್ಯೆ ಹೆಚ್ಚಾಗಿದೆ ಎಂದೇ ಹೇಳಬಹುದು. ಇದೇ ಕಾರಣಕ್ಕಾಗಿ ಓರ್ವ ಚಾಲಕನನ್ನು ಪ್ರಶ್ನಿಸಿದ ಎನ್ನುವ ಕಾರಣವೇ ಈಗ ಹತ್ಯೆಗ ಕಾರಣವಾಗಿದೆ. ಟಿಪ್ಪರ್ ಚಾಲಕನೋರ್ವ ವೇಗವಾಗಿ ಚಲಾಯಿಸಿದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ, ಕೋಪಗೊಂಡ ಟಿಪ್ಪರ್ ಚಾಲಕನೋರ್ವ ಸಿಟ್ಟುಗೊಂಡು, ರಾಡ್ ನಿಂದ ಹಲ್ಲೆಗೈದು, ಟಿಪ್ಪರ್ ಚಲಾಯಿಸಿ ಭೀಕರವಾಗಿ ಹತ್ಯೆ ನಡೆಸಿದ ಘಟನೆಯೊಂದು ಇಲ್ಲಿನ ಹೊರವಲಯದ ಮೂಡುಬಿದ್ರೆ ಕೋಟೆಬಾಗಿಲು ಎಂಬಲ್ಲಿ ನಡೆದಿದೆ.
ಕೋಟೆ ಬಾಗಿಲು ನಿವಾಸಿ ಫಯಾಜ್ ( 61) ಎಂಬಾತನೇ ಮೃತ ವ್ಯಕ್ತಿ. ಕೃತ್ಯ ಎಸಗಿದ ವ್ಯಕ್ತಿ ಹೆಸರು ಆರಿಫ್ ಎಂಬುದಾಗಿದ್ದು, ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಮಸೀದಿಗೆ ಮೃತ ವ್ಯಕ್ತಿಯು ತೆರಳುತ್ತಿದ್ದ ಸಂದರ್ಭದಲ್ಲಿ ಟಿಪ್ಪರೊಂದು ವೇಗವಾಗಿ ಬಂದು ಧೂಳು ಹಾರಿಸಿದ್ದು ಇದನ್ನು ಚಾಲಕನಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅನಂತರ ಆ ವ್ಯಕ್ತಿ ಮಸೀದಿಗೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಮತ್ತೆ ಮಾತಿನ ಜೋರು ಶುರುವಾಗಿದೆ.
ಕೂಡಲೇ ಕೋಪಗೊಂಡ ಟಿಪ್ಪರ್ ಚಾಲಕ ಫಯಾಜ್ ಅವರ ತಲೆಗೆ ರಾಡ್ ನಲ್ಲಿ ಹೊಡೆದು ನೆಲಕ್ಕೆ ಬೀಳಿಸಿ, ಬಳಿಕ ಅವರ ಮೈಮೇಲೆಯೇ ಟಿಪ್ಪರ್ ಚಲಾಯಿಸಿ ಹತ್ಯೆ ನಡೆಸಿ ವಿಕೃತಿ ಮೆರೆದಿದ್ದಾನೆ ಎಂದು ತಿಳಿದುಬಂದಿದೆ.
ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಅದಾಗಲೇ ಫಯಾಜ್ ಮೃತನಾಗಿರುವುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಪತ್ತೆಗೆ ಕ್ರಮ ವಹಿಸಿದ್ದಾರೆ ಎನ್ನಲಾಗಿದೆ.