Big News | ಡಿಕೆಶಿ ವಿರುದ್ಧ ಸಾಲು ಸಾಲು ದೂರು ಹೇಳಿ ಸಿದ್ದರಾಮಯ್ಯ ಸೋನಿಯಾ ಗಾಂಧಿಗೆ ಪತ್ರ, ಅಸಲಿಯತ್ತು ಯಾರಿಗೆ ಗೊತ್ತು ?
ನಿನ್ನೆಯಿಂದ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಕೂಡ ರಾಜ್ಯದ ಕಾಂಗ್ರೆಸ್ ಪಾರ್ಟಿಯಲ್ಲಿ ‘ಪತ್ರ’ವೊಂದು ಭಾರೀ ಸಂಚಲನ ಮೂಡಿಸಿತ್ತು. ಹೌದು, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತ ಸಾಕಷ್ಟು ಸುದ್ದಿಮಾಡಿತ್ತು. ಇದೀಗ ಈ ಪತ್ರದ ಕುರಿತು ಮೌನ ಮುರಿದ ಸಿದ್ದು, ಅದರ ಅಸಲಿ ವಿಚಾರವನ್ನು ತಿಳಿಸಿ, ಟ್ವೀಟ್ ಮಾಡಿದ್ದಾರೆ .
ಹೌದು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ, ಕೆಪಿಸಿಸಿ ಹಾಲಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ, ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೀಗ ಇದು ನಕಲಿ ಪತ್ರವೆಂದು ಸಾಬೀತಾಗಿದೆ. ಸ್ವತಃ ಸಿದ್ದರಾಮಯ್ಯನವರೇ, ಇದೊಂದು ನಕಲಿ ಪತ್ರವೆಂದು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು ಮತ್ತು ತಮ್ಮ ಸಂಬಂಧಕ್ಕೆ ಧಕ್ಕೆ ತರುವ ದುರುದ್ದೇಶ ಇದಾಗಿದೆ ಎಂದು ಆರೋಪಿಸಿದ್ದಾರೆ. ನಕಲಿ ಪತ್ರದ ಸಂಬಂಧ ಪೊಲೀಸರಿಗೆ ದೂರನ್ನೂ ಕೂಡ ದಾಖಲಿಸಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ಅವರು ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಗೆಲುವಿನ ಹಾದಿಯಲ್ಲಿರುವ ನಮ್ಮ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದಲೇ ಈ ಖೊಟ್ಟಿ ಪತ್ರವನ್ನು ಹರಿಯಬಿಡಲಾಗಿದೆ’ ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಸಮಾರೋಪದಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ ಹಾಗೂ ಟಿಕೆಟ್ ಹಂಚಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಗುಂಪುಗಾರಿಕೆ ಇದೆ. ಇದು ಬಂಡಾಯಕ್ಕೆ ಕಾರಣವಾಗುತ್ತದೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ನಕಲಿ ಪತ್ರದಲ್ಲಿ ಬಿಂಬಿಸಲಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರೇ ಸ್ವತಃ ಈ ಕುರಿತು ಹೇಳಿಕೆ ಕೊಟ್ಟಿದ್ದು, ಗೊಂದಲಗಳಿಗೆ ತೆರೆ ಎಳೆದಂತಾಗಿದೆ.