ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ! ಬಜೆಟ್ ನಲ್ಲಿ 5,300 ಕೋಟಿ ರೂ. ನೀಡಿದ ಕೇಂದ್ರ! ಕರ್ನಾಟಕಕ್ಕೆ ಸಿಕ್ತು ಬಂಪರ್ ಕೊಡುಗೆ
ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಈ ಸಲದ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಭರ್ಜರಿ ಕೊಡುಗೆಗಳ ಮಹಾಪೂರವೇ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದ್ದು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಈ ಯೋಜನೆಗೆ 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಪ್ರಕಟಿಸಿದ್ದು, ಮಧ್ಯ ಕರ್ನಾಟಕದ ಪಾಲಿಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಕೇಂದ್ರ ಬಜೆಟ್ ಅಂತೂ ಜನರಿಗೆ ಸಂತಸ ತಂದಿದೆ. ಚುನಾವಣೆಗೆ ಒಳಪಡುವ ಕರ್ನಾಟಕಕ್ಕೆ ಸುಸ್ಥಿರ ಸೂಕ್ಷ್ಮ ನೀರಾವರಿ ಮತ್ತು ಟ್ಯಾಂಕ್‌ಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ರೂ 5300 ಕೋಟಿಯನ್ನು ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಕೇಂದ್ರದಿಂದ 23 ಸಾವಿರ ಕೋಟಿ ರೂಪಾಯಿ ಬೇಡಿಕೆ ಇಟ್ಟಿತ್ತಾದರೂ, ಬಜೆಟ್‌ನಲ್ಲಿ 5300 ಕೋಟಿ ಅನುದಾನ ನೀಡಲಾಗಿದೆ.
ಈ ಹಿಂದೆ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಯೋಜನೆಗೆ 23,000 ಕೋಟಿ ರೂ. ವೆಚ್ಚವಾಗಲಿದ್ದು, ಸದ್ಯ 16,000 ಕೋಟಿ ರೂ. ವೆಚ್ಚದ ಕೆಲಸ ಬಾಕಿ ಇದೆ. ರಾಷ್ಟ್ರೀಯ ಯೋಜನೆ ಘೋಷಣೆ ನಂತರ ಯೋಜನೆಯಡಿ ಬಾಕಿಯಿರುವ ಮೊತ್ತದಲ್ಲಿಶೇ. 60ರಷ್ಟನ್ನು ಕೇಂದ್ರ ಭರಿಸಲಿದೆ. ಅದರಂತೆ ಕೇಂದ್ರದಿಂದ ಯೋಜನೆಗೆ 5,300 ಕೋಟಿ ರೂ. ಸಿಗುವ ನಿರೀಕ್ಷೆ ಇದೆ, ಎಂದು ತಿಳಿಸಿದ್ದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿ.ಎಂ.ಸಿ. ನೀರಿನ ಬಳಕೆಯೊಂದಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮತ್ತು ಇದೇ ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮಥ್ರ್ಯದ ಶೇ. 50 ರಷ್ಟನ್ನು ತುಂಬಿಸಲು ಉದ್ದೇಶಿಸಲಾಗಿದೆ.