Palmistry Career Line: ನಿಮಗೆ ಸರಕಾರಿ ಹುದ್ದೆ ದೊರಕುತ್ತಾ ಇಲ್ವಾ ಅಂತಾ ನಿಮ್ಮ ಕೈ ರೇಖೆ ಹೇಳುತ್ತೆ ! ಬೆಸ್ಟ್ ಜಾಬ್ ನಿಮಗಾವುದು?
ನಮ್ಮ ಭವಿಷ್ಯ ನಮ್ಮ ಅಂಗೈಯಲ್ಲಿ ಅಡಗಿರುತ್ತದೆ ಎಂಬುವುದು ಹೆಚ್ಚಿನವರ ನಂಬಿಕೆ. ಹೌದು, ಹಸ್ತರೇಖೆ ಶಾಸ್ತ್ರದ ಮೂಲಕ ಮಾನವನ ಬದುಕಿನ ಆಗು- ಹೋಗುಗಳ ಬಗ್ಗೆ ತಿಳಿಯಬಹುದು. ಇನ್ನು ಹೆಚ್ಚಿನವರಿಗೆ ತನ್ನ ಬದುಕಿನ ವೃತ್ತಿಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಜೊತೆಗೆ ಯಾವ ಕಾರ್ಯಕ್ಷೇತ್ರದಲ್ಲಿ ಮುಂದುವರಿದರೆ ಯಶಸ್ವಿಯಾಗುತ್ತೇನೆಂಬ ಸಣ್ಣ ಚಿಂತೆಯು ಇರುತ್ತದೆ. ಆದರೆ, ಚಿಂತೆ ಪಡಬೇಕಿಲ್ಲ ಹಸ್ತ ರೇಖೆಯ ಪ್ರಕಾರ, ನಿಮ್ಮ ವೃತ್ತಿ ಬದುಕನ್ನು ನಿಮ್ಮ ಅಂಗೈಯಲ್ಲಿರುವ ಚಿಹ್ನೆಗಳ ಮೂಲಕ ಕಂಡುಹಿಡಿಯಬಹುದು. ನಿಮ್ಮ ಅಂಗೈಯಲ್ಲಿ ಈ ಒಂದು ಚಿಹ್ನೆಯಿದ್ದರೆ ನಿಮಗೆ ಸರಕಾರಿ ಉದ್ಯೋಗ ಸಿಗೋದು ಖಂಡಿತ!!
ಗುರು ಪರ್ವತ:- ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ತೋರುಬೆರಳಿನ ಕೆಳಗಿನ ಭಾಗವನ್ನು ಗುರು ಪರ್ವತ ಎಂದು ಕರೆಯಲಾಗುತ್ತದೆ. ಅಂಗೈನ ಈ ಭಾಗವು ಉಬ್ಬಿದ್ದರೆ, ಅಂತಹ ಜನರು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದರ್ಥ. ಅವರ ವೃತ್ತಿಜೀವನಕ್ಕೆ ನಿರ್ವಹಣಾ ಕ್ಷೇತ್ರವು (ಮ್ಯಾನೇಜ್ಮೆಂಟ್) ಎಲ್ಲಕ್ಕಿಂತ ಚೆನ್ನಾಗಿರುತ್ತದೆ. ಇದಲ್ಲದೆ, ಅಂತಹ ಜನರು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ, ವೈದ್ಯಕೀಯ, ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಶನಿ ಪರ್ವತ:- ಹಸ್ತರೇಖಾ ಶಾಸ್ತ್ರದ ಪ್ರಕಾರ, ಮಧ್ಯದ ಬೆರಳಿನ ಕೆಳಗಿರುವ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಕೆಲವರ ಅಂಗೈಯಲ್ಲಿ ಶನಿ ಪರ್ವತ ಇರುತ್ತದೆ. ಅಂತಹ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂದರೆ, ಶನಿ ಪರ್ವತ ಉಬ್ಬಿದ್ದರೆ, ಇದರರ್ಥ ವ್ಯಕ್ತಿಯು ಹೆಚ್ಚು ಶ್ರಮವಹಿಸಿದ ನಂತರವೇ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು, ಶ್ರಮದ ಪ್ರತಿಫಲವನ್ನು ಪಡೆಯುತ್ತಾನೆ. ಆದ್ದರಿಂದ, ಅಂತಹ ವ್ಯಕ್ತಿಯು ಎಂಜಿನಿಯರಿಂಗ್, ಸಂಶೋಧನೆ ಮತ್ತು ಪುರಾತತ್ವ ವಿಭಾಗಕ್ಕೆ ಸಂಬಂಧಿಸಿದ ಕ್ಷೇತ್ರವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು ಇದರಿಂದ ಯಶಸ್ಸು ಅವರಿಗೆ ಲಭಿಸುತ್ತದೆ.
ಸೂರ್ಯ ಪರ್ವತ:- ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಉಂಗುರದ ಬೆರಳಿನ ಕೆಳ ಭಾಗವನ್ನು ಸೂರ್ಯ ಪರ್ವತ ಎಂದು ಕರೆಯಲಾಗುತ್ತದೆ. ಈ ಸೂರ್ಯ ಪರ್ವತವು ಉಬ್ಬಿದಂತಿದ್ದರೆ ಅಂತಹ ವ್ಯಕ್ತಿಗಳು ಕ್ರಿಯಾತ್ಮಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಉದಾಹರಣೆಗೆ ಮನೆ ಅಲಂಕಾರ, ಪೇಂಟಿಂಗ್ ಮತ್ತು ಜಾಹೀರಾತು ವಿಭಾಗದಲ್ಲಿ ಯಶಸ್ಸು ಕಾಣುತ್ತಾರೆ. ಇದರೊಂದಿಗೆ ಎಂಜಿನಿಯರಿಂಗ್ ಮತ್ತು ಸರ್ಕಾರಿ ಕ್ಷೇತ್ರದಲ್ಲೂ ಕೂಡ ಯಶಸ್ವಿಯಾಗುತ್ತಾರೆ. ಅಲ್ಲದೇ, ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಬುಧ ಪರ್ವತ:- ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕನಿಷ್ಕ ಬೆರಳು ಅಥವಾ ಕಿರುಬೆರಳಿನ ಕೆಳಭಾಗವನ್ನು ಬುಧ ಪರ್ವತ ಎಂದು ಕರೆಯಲಾಗುತ್ತದೆ. ಎರಡೂ ಕೈಯಲ್ಲಿ ಬುಧ ಪರ್ವತ ಉಬ್ಬಿದ್ದರೆ, ನೀವು ನಿಮ್ಮ ಆಯ್ಕೆಯ ಪ್ರಕಾರ ಸ್ವಂತ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಇವರು ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುತ್ತಾರೆ. ಇದಲ್ಲದೆ, ಈ ಜನರು ಬ್ಯಾಂಕಿಂಗ್ (Banking) ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.
ಶುಕ್ರ ಪರ್ವತ:- ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ಹೆಬ್ಬೆರಳಿನ ಕೆಳಗಿರುವ ಭಾಗವನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ. ಈ ಪರ್ವತದ ಭಾಗ ನಿಮ್ಮ ಅಂಗೈಯಲ್ಲಿ ಉಬ್ಬಿದಂತಿದ್ದರೆ, ಸೌಂದರ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ನೀವು ವಿಶೇಷವಾದ ಯಶಸ್ಸನ್ನು ಗಳಿಸಬಹುದು. ಸೌಂದರ್ಯ ಉದ್ಯಮ, ಸಂಗೀತ, ಕಲೆ, ಅಲಂಕಾರ ಕ್ಷೇತ್ರಗಳಲ್ಲಿ ನೀವು ಹೆಸರನ್ನು ಗಳಿಸಬಹುದು.