ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆ: 5ರಿಂದ 7 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ! ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ ಸೀತಾರಾಮನ್!
ಹಲವು ರಾಜ್ಯಗಳ ಚುನಾವಣೆ ಸೇರಿ, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಬಜೆಟ್ ಭಾಷಣ ಮಾಡುತ್ತಿರುವ ಸಚಿವು ಇದೀಗ ಮಧ್ಯಮ ವರ್ಗದ ಜನರಿಗೆ ಸಖತ್ ಗುಡ್ ನ್ಯೂಸ್ ನೀಡಿದ್ದಾರೆ.
ಇನ್ನು ಮಧ್ಯಮ ವರ್ಗಕ್ಕೆ 5 ರಿಂದ 7 ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ! ಹೌದು, ಹೊಸ ತೆರಿಗೆ ವಿಧಾನದ ಅಡಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಘೋಷಿಸಿದರು.
ವೈಯಕ್ತಿಕ ಆದಾಯ ತೆರಿಗೆ ವಿಚಾರದಲ್ಲಿ 5 ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮಧ್ಯಮ ವರ್ಗದ ವೇತನದಾರ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಹೊಸ ತೆರಿಗೆ ವಿಧಾನದ ಅಡಿಯಲ್ಲಿ 7 ಲಕ್ಷ ರೂ. ಆದಾಯದವರೆಗೂ ಆದಾಯ ತೆರಿಗೆ ಇರುವುದಿಲ್ಲ ಎಂದು ಅವರು ಹೇಳಿದರು. ಉಳಿದಂತೆ, ಹಳೆ ವಿಧಾನದ ಅಡಿಯಲ್ಲಿ 3ರಿಂದ 6 ಲಕ್ಷದ ರೂ.ವರೆಗೂ ಶೇಕಡ 5ರಷ್ಟು ತೆರಿಗೆ ಇರಲಿದೆ. 6ರಿಂದ 9 ಲಕ್ಷ ರೂ.ವರೆಗೂ ಶೇಕಡ 10ರಷ್ಟು ತೆರಿಗೆ, 9ರಿಂದ 12 ಲಕ್ಷ ರೂ.ವರೆಗೂ ಶೇಕಡ 15ರಷ್ಟು ತೆರಿಗೆ ಹಾಗೂ 12ರಿಂದ 15 ಲಕ್ಷ ರೂ.ವರೆಗೂ ಶೇಕಡ 20ರಷ್ಟು ತೆರಿಗೆ ಇರಲಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ. ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ 7 ಲಕ್ಷದ ರೂ.ರೆಗಿನ ತೆರಿಗೆ ವಿನಾಯ್ತಿ ಲಭ್ಯವಾಗಲಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.