ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ವರ್ಷಕ್ಕೊಮ್ಮೆ ರೈತರಿಗೆ ಸಿಗುತ್ತೆ ಎಕರೆಗೆ 10 ಸಾವಿರ, ವೃದ್ಧರಿಗೆ 5 ಸಾವಿರ!! ಮಾಜಿ ಸಿಎಂ ಕೊಟ್ರು ಬಂಪರ್ ಆಫರ್!!
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಏನೆಲ್ಲಾ ಕೊಡುಗೆಗಳನ್ನು, ಸೌಲಭ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಗಳು ಘೋಷಣೆ ಮಾಡಿವೆ, ಮಾಡುತ್ತಿವೆ. ಇದೀಗ ಜೆಡಿಎಸ್ ಸರದಿ. ಇಷ್ಟು ದಿನ ರೈತರ ಸಾಲಮನ್ನಾ ಮಾಡುವ ಮಂತ್ರವನ್ನು ಜಪಿಸುತ್ತಿದ್ದ ಕುಮಾರಸ್ವಾಮಿಯವರು ಇದೀಗ ವೃದ್ಧರಿಗೂ ಸೇರಿದಂತೆ ರೈತರಿಗೆ ಭರ್ಜರಿಯಾದ ಆಫರ್ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾರ್ಟಿಗಳ ಘೋಷಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಆಫರ್ ಘೋಷಣೆ ಮಾಡಿರುವ ಮಾಜಿ ಸಿಎಂ, ಆ ಎರಡು ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆನೇ ಇಟ್ಟಿದ್ದಾರೆನ್ನಬಹುದು.
ಹೌದು,ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಪ್ರತಿ ಎಕರೆ ಜಮೀನಿಗೆ ಪ್ರತಿವರ್ಷ 10 ಸಾವಿರ ಆರ್ಥಿಕ ನೆರವು, ವೃದ್ಧಾಪ್ಯ ವೇತನ 5 ಸಾವಿರಕ್ಕೆ ಹೆಚ್ಚಳ ಮತ್ತು ವಿಧವಾ ವೇತನ 2,500ಗೆ ಏರಿಕೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಯಲ್ಲಿ ಈ ಘೋಷಣೆ ಮಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರನ್ನು ಸಾಲಮುಕ್ತಗೊಳಿಸುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿ ಪಂಚರತ್ನ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದು ಹೇಳಿದರು.
ಅಲ್ಲದೆ ಯುವಕರು, ಯುವತಿಯರಿಗೆ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಸಂಘಗಳ ಸಂಪೂರ್ಣ ಸಾಲಮನ್ನಾ ಯೋಜನೆಗಳನ್ನು ಜಾರಿ ಮಾಡಿಯೇ ತೀರುತ್ತೇನೆ. ಇದಕ್ಕೆ ಸುಮಾರು .2.5 ಲಕ್ಷ ಕೋಟಿ ಬಜೆಟ್ ಅಗತ್ಯವಿದೆ. ಅದನ್ನು ಸಂಗ್ರಹಿಸುವುದು ಹೇಗೆಂಬುದು ಗೊತ್ತಿದೆ ಎಂದರು. ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿದರೆ ಯೋಜನೆಗಳ ಅನುಷ್ಠಾನ ಅಸಾಧ್ಯ. ಆದ್ದರಿಂದ ಜೆಡಿಎಸ್ಗೆ ಸಂಪೂರ್ಣ ಅಧಿಕಾರ ನೀಡುವಂತೆ ಮನವಿ ಮಾಡಿದರು.
ಒಂದು ವೇಳೆ ಸಂಪೂರ್ಣ ಅಧಿಕಾರಕ್ಕೆ ಬಂದರೂ ಭರವಸೆ ಈಡೇರಿಸದಿದ್ದರೆ ಜೆಡಿಎಸ್ಅನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಘೋಷಿಸಿದರು. ಜೊತೆಗೆ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ.ಶರಣಪ್ಪ ಜತೆಗಿದ್ದಾಗ ಈ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿತ್ತು. ಅದಾದ ನಂತರ ಇಲ್ಲಿ ಪಕ್ಷಕ್ಕೆ ಅಷ್ಟಾಗಿ ಬಲ ಇರಲಿಲ್ಲ. ಆದರೆ ಇದೀಗ ಜನ ಸೇರಿರುವುದನ್ನು ನೋಡಿದ ಮೇಲೆ ಈ ಭಾಗದಲ್ಲಿ ನಮ್ಮ ಶಕ್ತಿ ಇದೆ ಎನ್ನುವ ಆಶಾಭಾವ ಮೂಡಿದೆ ಎಂದು ಹೇಳಿದರು.
ಇನ್ನು ವಿಧಾನಸಭಾ ಕ್ಷೇತ್ರದ ತಾವರಗೇರಾ ಗ್ರಾಮದಲ್ಲಿ ಅಭಿಮಾನಿಗಳು ಜೆಸಿಬಿಯಲ್ಲಿ ನಿಂತು ಕುಮಾರಸ್ವಾಮಿ ಅವರಿಗೆ ಹೂವು ಮಳೆ ಸುರಿಸಿದರೆ, ಮಹಿಳೆಯೊಬ್ಬರು 5 ಸಾವಿರ ನಗದು ಮತ್ತು ಎಳನೀರು ನೀಡಿ ಅಭಿಮಾನ ಮೆರೆದ ಘಟನೆ ನಡೆದಿದೆ. ಈ ಮಹಿಳೆ ಸುಜಾತ ಎಂಬುವವರಾಗಿದ್ದು ಕುಮಾರಸ್ವಾಮಿ ಬಡವರ ಪರ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಅಭಿಮಾನದಿಂದ ಹಣ ನೀಡಿರುವುದಾ ಗಿತಿಳಿಸಿದ್ದಾರೆ.