ಹೃದಯಾಘಾತಕ್ಕೊಳಗಾದ 14 ವರ್ಷದ ಹುಡುಗಿ | ಹೀಗಾಗಲು ಇದೊಂದು ಮೂಲ ಕಾರಣವಾಯಿತೇ?

ಇತ್ತೀಚೆಗೆ ಸಾವಿನ ಸಂಖ್ಯೆಯು ಹೆಚ್ಚಾಗಿದ್ದು, ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಇಂದಿನ ದಿನದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಗಗನಕ್ಕೇರಿದೆ. ಈ ಹೃದಯಾಘಾತಕ್ಕೆ ಚಿಕ್ಕವಯಸ್ಸಿನವರೂ ಬಲಿಯಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ ಯಾರಿಗೆ ಯಾವಾಗ ಏನಾಗಬಹುದು ಎಂಬುದನ್ನು ಊಹಿಸಲು ಅಸಾಧ್ಯವಾಗಿಬಿಟ್ಟಿದೆ. ಸಾವು ಹೇಳಿ, ಕೇಳಿ ಬರೋದಿಲ್ಲ. ಆದ್ರೆ ಕೆಲವೊಂದು ಅನಿರೀಕ್ಷಿತ ಸಾವುಗಳಿಗೆ ದೈನಂದಿನ ಬಳಕೆಯ ವಸ್ತುಗಳೇ ಕಾರಣವಾಗಬಹುದಂತೆ!!.

ಇಂಗ್ಲೆಂಡ್‌ನ ಡರ್ಬಿಯಲ್ಲಿ 2022ರ ಮೇ 11 ರಂದು ಜಾರ್ಜಿಯಾ ಗ್ರೀನ್ ಎಂಬ 14 ವರ್ಷದ ಹುಡುಗಿ ಹೃದಯಾಘಾತದಿಂದ ಮೃತಪಟ್ಟಿದ್ದಳು. ಆದರೆ ಆಕೆ ಸಾವನ್ನಪ್ಪುವ ಮುನ್ನ ಡಿಯೊಡರೆಂಟ್ ಸ್ಪ್ರೇ ಮಾಡಿಕೊಂಡಿದ್ದಳು ಇದಾದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಳು ಎಂದು ಆಕೆಯ ಹೆತ್ತವರು ತಿಳಿಸಿದ್ದಾರೆ. ಆಕೆಯ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲವಾದರೂ ಸಾಕಷ್ಟು ಪ್ರಮಾಣದಲ್ಲಿ ಏರೋಸಾಲ್ ಉಸಿರಿನಲ್ಲಿ ಒಳಗೆಳೆದುಕೊಂಡಿದ್ದರಿಂದ ಸಾವು ಸಂಭವಿಸಿದೆ ಎಂಬುದು ತಿಳಿದುಬಂದಿದೆ. ಹಾಗೇ ಡಿಯೊಡರೆಂಟ್‌ನಲ್ಲಿ ಬಳಸುವ ವಸ್ತುಗಳಲ್ಲಿ ಒಂದಾಗಿರುವ ಏರೋಸಾಲ್ ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಏರೋಸಾಲ್ ಒಳಗೊಂಡಿರುವ ಡಿಯೊಡರೆಂಟ್ ಬಗ್ಗೆ ಅದರ ಬಾಟಲಿ ಮೇಲೆ ಸ್ಪಷ್ಟ ಎಚ್ಚರಿಕೆ ನೀಡಲಾಗುತ್ತದೆ. ಅದರಲ್ಲಿ, ಮಕ್ಕಳಿಂದ ದೂರವಿಡಿ ಎಂದು ಬರೆಯಲಾಗಿದೆ ಎಂಬುದಾಗಿ ಬ್ರಿಟಿಷ್ ಏರೋಸಾಲ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್ (ಬಿಎಎಂಎ) ಹೇಳಿದೆ. ಆದರೆ ಈ ಎಚ್ಚರಿಕೆಯ ಮಾಹಿತಿಯನ್ನು ದೊಡ್ಡ ಅಕ್ಷರಗಳಲ್ಲಿ, ಸ್ಪಷ್ಟವಾಗಿ, ಸರಿಯಾದ ರೀತಿಯಲ್ಲಿ ಬರೆಸಬೇಕು, ತಮ್ಮ ಮಗಳಿಗೆ ಆದ ಪರಿಸ್ಥಿತಿ ಇತರರಿಗೂ ಆಗಬಾರದು ಎಂದು ಜಾರ್ಜಿಯಾ ಪಾಲಕರು ಆಗ್ರಹಿಸಿದ್ದಾರೆ.

ಜಾರ್ಜಿಯಾ ಮರಣ ಪ್ರಮಾಣಪತ್ರದಲ್ಲಿ ಇನ್‌ಹಲೇಷನ್ ಆಫ್ ಏರೋಸಾಲ್ ಎಂಬುದು ಉಲ್ಲೇಖಗೊಂಡಿದೆ. ಅಲ್ಲದೆ, ಅಲ್ಲಿನ ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ಒಎನ್ಎಸ್) ಪ್ರಕಾರ 2001 ರಿಂದ 2020ರ ವರೆಗೆ ಸಂಭವಿಸಿದ ಸಾವುಗಳಲ್ಲಿ 11 ಡೆತ್ ಸರ್ಟಿಫಿಕೆಟ್‌ನಲ್ಲಿ ಡಿಯೊಡರೆಂಟ್ ಕಾರಣದಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿರುವುದು ಕೂಡ ತಿಳಿದುಬಂದಿದೆ. ಇದಿಷ್ಟೆ ಅಲ್ಲದೆ, ಡಿಯೊಡರೆಂಟ್‌ಗಳಲ್ಲಿ ಬಳಸುವ ಬ್ಯೂಟೇನ್ ಕೂಡ ಸಾವಿಗೆ ಕಾರಣವಾಗಬಹುದಂತೆ. ಜಾರ್ಜಿಯಾ ಬಳಸಿದ್ದ ಡಿಯೊಡರೆಂಟ್‌ನಲ್ಲಿ ಪ್ರೊಪೇನ್ ಮತ್ತು ಐಸೋಬ್ಯೂಟೇನ್ ಇತ್ತು ಎನ್ನಲಾಗಿದೆ. ಈ ಬ್ಯೂಟೇನ್ ಅಥವಾ ಪ್ರೊಪೇನ್ ಅನಿಲ ಸೇವನೆ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಒನ್‌ಎಸ್ ತಿಳಿಸಿದೆ.

Leave A Reply

Your email address will not be published.