ವಿಮಾನದೊಳಗೆ ಅರೆಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಮಹಿಳೆ!
ಹೊಸ ವರ್ಷ ಬಹುಶಃ ವಿಮಾನಗಳ ವಿಚಾರದಲ್ಲಿ ಕಂಟಕವಾಗಿ ಪರಿಣಮಿಸಿದೆಯೇನೋ! ವಾರಕ್ಕೊಮ್ಮೆ ಆದರೂ ವಿಮಾನದ ಸಮಸ್ಯೆಗಳು, ಅದರಲ್ಲಿ ಆಗುವ ವಿವಾದದ ಘಟನೆಗಳು ಮುನ್ನಲೆಗೆ ಬರುತ್ತಿದ್ದವು. ಆದರೆ ಇದೀಗ ಪ್ರತೀದಿನವೂ ವಿಮಾನದ ಬಗ್ಗೆ ಒಂದಾದರೂ ಸುದ್ದಿ ಇದ್ದೇ ಇರುತ್ತದೆ. ಇಂದು ಕೂಡ ವಿಸ್ತಾರ ವಿಮಾನವೊಂದು ಸುದ್ದಿಯಲ್ಲಿದ್ದು, ಅದರಲ್ಲಿದ್ದ ಇಟಲಿ ಮಹಿಳಾ ಪ್ರಯಾಣಿಕಳೊಬ್ಬಳು ಮಾಡಿದ ರಾದ್ಧಾಂತ ಇದಕ್ಕೆ ಕಾರಣ ಎನ್ನಲಾಗಿದೆ.
ಹೌದು, ಅಬುಧಾಬಿಯಿಂದ ಮುಂಬೈಗೆ ಆಗಮಿಸಿದ ವಿಸ್ತಾರಾ ವಿಮಾನದಲ್ಲಿ ಸೋಮವಾರ ಇಟಲಿಯ ಮಹಿಳಾ ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಳಿಕ ಆಕೆ ಜಾಮೀನು ಪಡೆದು ಬಿಡುಗಡೆ ಕೂಡ ಆಗಿದ್ದಾಳೆ.
ಗದ್ದಲ ಸೃಷ್ಟಿಸಿದ ಈ ಮಹಿಳೆಯನ್ನು ಇಟಲಿಯ ಪಾವೊಲಾ ಪೆರುಸಿಯೋ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಮಹಿಳೆ ಎಕನಾಮಿ ಟಿಕೆಟ್ ಪಡೆದಿದ್ದರೂ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾಳೆ. ಇದನ್ನು ತಡೆಯಲು ಪ್ರಯತ್ನಿಸಿದ ಕ್ಯಾಬಿನ್ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೇ ತಾನು ಧರಿಸಿದ್ದ ಕೆಲವು ಬಟ್ಟೆಗಳನ್ನು ಕಳಚಿ ಅರೆಬೆತ್ತಲಾಗಿ ಓಡಾಡಿದ್ದಾಳೆ. ಜೊತೆಗೆ ಆಕೆ ಕುಡಿದ ಮತ್ತಿನಲ್ಲಿದ್ದಳು ಎನ್ನಲಾಗಿದೆ.
ಆಕೆಯ ವಿರುದ್ಧ ಏರ್ ವಿಸ್ತಾರ ಯುಕೆ-256 ವಿಮಾನದಲ್ಲಿದ್ದ ಸಿಬ್ಬಂದಿ ದೂರು ನೀಡಿದ್ದಾರೆ. ಮಹಿಳೆಯ ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ಕುರಿತು ಪ್ರತಿಕ್ರಿಯಿಸಿದ ವಿಮಾನ ಯಾನ ಸಂಸ್ಥೆಯ ವಕ್ತಾರರು ‘ಅಬುಧಾಬಿಯಿಂದ ಮುಂಬೈಗೆ ಸಂಚರಿಸುತ್ತಿದ್ದ ವಿಸ್ತಾರ ಯುಕೆ–256 ವಿಮಾನದಲ್ಲಿದ್ದ ಮಹಿಳೆ ಅಶಿಸ್ತು ತೋರಿದ್ದಾರೆ ಎಂಬುದನ್ನು ಖಚಿತಪಡಿಸುತ್ತಿದ್ದೇವೆ. ಅಶಿಸ್ತು ಮತ್ತು ಹಿಂಸಾ ಕೃತ್ಯ ನಡೆಸಿದ್ದನ್ನು ಗಮನದಲ್ಲಿರಿಸಿ, ಎಚ್ಚರಿಕೆಯ ಕಾರ್ಡ್ ನೀಡಲು ಹಾಗೂ ಮಹಿಳೆಯನ್ನು ನಿರ್ಬಂಧಿಸಲು ವಿಮಾನದ ಕ್ಯಾಪ್ಟನ್ ನಿರ್ಧರಿಸಿದರು’ ಎಂದು ತಿಳಿಸಿದ್ದಾರೆ.