545 ಪಿಎಸ್‌ಐ ಹುದ್ದೆಗಳಿಗೆ ನಡೆಯಲಿದೆ ಮರು ಪರೀಕ್ಷೆ! ಇಲ್ಲಿದೆ ನೋಡಿ ಡಿಜಿಪಿ ಪ್ರವೀಣ್ ಸೂದ್ ನೀಡಿದ ಮಹತ್ವದ ಮಾಹಿತಿ

ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ 545 ಪೊಲೀಸ್ ಸಬ್ಇನ್‌ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಮತ್ತೆ ಯಾವಾಗ ನಡೆಯಲಿದೆ ಎಂಬುದಕ್ಕೆ ಕೊನೆಗೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ಉತ್ತರ ಸಿಕ್ಕಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಹೌದು, ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಹಿನ್ನೆಲೆಯಲ್ಲಿ ಇದೀಗ 545 ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಸಿದ್ಧರಿದ್ದೇವೆ ಎಂದು ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಪ್ರವೀಣ್ ಸೂದ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮರು ಪರೀಕ್ಷೆ ನಡೆಸಲು ನಾವು ಸಿದ್ಧರಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಪ್ರಕರಣ ಸಂಪೂರ್ಣ ಇತ್ಯರ್ಥವಾಗುವರೆಗೂ ನೇಮಕಾತಿ ಪ್ರಕ್ರಿಯೆ ನಡೆಸದಂತೆ ನ್ಯಾಯಾಲಯ ನಿರ್ಬಂಧ ಹೇರಿತ್ತು. ಆದರೆ, ಪಿಎಸ್ಐ ಹಗರಣ ತನಿಖೆ ಮುಗಿಯಲು ಇನ್ನೂ ವರ್ಷಗಳ ಕಾಲ ಬೇಕು. ಆದರೆ ಮರುಪರೀಕ್ಷೆ ಬೇಗ ಆಗಬೇಕು ಎಂದು ಲಕ್ಷಾಂತರ ಅಭ್ಯರ್ಥಿಗಳು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದು, ಹೀಗಾಗಿ ಕೋರ್ಟ್ ಅನುಮತಿ ನೀಡಿದರೆ ನಾವು ಮರುಪರೀಕ್ಷೆ ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.

545 ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದು ಆರೋಪ. ಕರ್ನಾಟಕ ಸರ್ಕಾರ ಈ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿದೆ ಮತ್ತು ಈ ಹಿಂದೆ ನಡೆದಿದ್ದ ಲಿಖಿತ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೆಲವು ಅಭ್ಯರ್ಥಿಗಳು ಸರ್ಕಾರದ ತೀರ್ಮಾನ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೋರ್ಟ್‌ ಮಧ್ಯಂತರ ಆದೇಶದ ಅನ್ವಯ ಈಗ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅಲ್ಲದೇ ಕೋರ್ಟ್‌ ನೀಡುವ ಆದೇಶದ ಮೇಲೆ ಮುಂದಿನ ತೀರ್ಮಾನವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕಿದೆ.

ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಬೇಕು ಮತ್ತು ತನಿಖೆಯ ವಿವರಗಳನ್ನು ಸಲ್ಲಿಸುವಂತೆ ಕೋರಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ನಡೆಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿರೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹಿಂಪಡೆದಿದೆ. ಅಲ್ಲದೆ, ಮತ್ತೊಂದು ಪೀಠದ ಮುಂದೆ ವಿಚಾರಣೆ ನಿಗದಿಪಡಿಸುವಂತೆ ನೋಟಿಸ್ ನೀಡಲಾಗಿದೆ.

ಸದ್ಯ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಿಂದ ಹಿಡಿದು ರಾಜಕೀಯ ವ್ಯಕ್ತಿಗಳು ಅರೆಸ್ಟ್ ಆಗಿದ್ದಾರೆ. ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್​ಪಿ ಶಾಂತಕುಮಾರ್, ಎಫ್​ಡಿಎ ಹರ್ಷಾ, ಸಿಬ್ಬಂದಿಗಳಾದ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಹೆಸರು ಕೂಡ ಅಕ್ರಮದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಎತ್ತಂಗಡಿ ಮಾಡಲಾಗಿತ್ತು.

Leave A Reply

Your email address will not be published.