ಖ್ಯಾತ ಸಾಹಿತಿ,ಭಾಷಾ ವಿಜ್ಞಾನಿ ಕೆ.ವಿ.ತಿರುಮಲೇಶ್ ನಿಧನ

ಬೆಂಗಳೂರು: ಖ್ಯಾತ ಸಾಹಿತಿ, ಅನುವಾದಕ, ಭಾಷಾ ವಿಜ್ಞಾನಿ
ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದ ಡಾ.ಕೆ.ವಿ. ತಿರುಮಲೇಶ ಅವರು ನಿಧನರಾದರು

ಮೂಲತಃ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪದ ಕಾರಡ್ಕದವರಾದ ತಿರುಮಲೇಶರು 1940 ಸೆಪ್ಟೆಂಬರ್ 12ರದು ಜನಿಸಿದರು.

ಕಾಸರಗೋಡಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದರು.

ಕಾಸರಗೋಡು ಮತ್ತು ತಿರುವನಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಭ್ಯಾಸ ಮಾಡಿದ್ದರು. ಕೇರಳದ ಹಲವು ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ್ದರು.

1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದ ತಿರುಮಲೇಶ ಅವರು ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಗಳಿಸಿದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣಿ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿಎಚ್.ಡಿ ಪ್ರಬಂಧವಾಗಿತ್ತು.

ವಠಾರ, ಮುಖವಾಡಗಳು, ತಿರುಮಲೇಶರ ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕಾದಂಬರಿಗಳು.

ಕೆ.ವಿ.ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದರು‌.

Leave A Reply

Your email address will not be published.