ಮೀನು ಪ್ರಿಯರು ಎಂದಿಗೂ ಸೂಪರ್ ಹೆಲ್ದಿ | ಯಾಕಂದ್ರೆ ಫಿಶ್ ಸೇವನೆಯಿಂದ ದೊರೆಯುತ್ತೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!
ಸೀ ಫುಡ್ ಇಷ್ಟಪಡುವವರು ಮೀನು ತಿನ್ನುವುದನ್ನು ಮಾತ್ರ ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಕಾಟ್ಲಾ, ಭೂತಾಯಿ, ಬಂಗುಡೆ ಹೀಗೆ ನಾನಾ ರೀತಿಯ ಮೀನುಗಳು ನಮಗೆ ದೊರೆಯುತ್ತವೆ. ಒಂದೊಂದು ಮೀನು ಒಂದೊಂದು ರುಚಿ ಹೊಂದಿರುತ್ತದೆ. ನಿಯಮಿತದ ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯಕ್ಕೆ ಬಹಳ ಉಪಕಾರಿ. ಇದರಲ್ಲಿ ಹೆಚ್ಚು ಪ್ರೋಟಿನ್ ಅಂಶವಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಆರೋಗ್ಯವೃದ್ಧಿಗೆ ಇದು ಬಹಳ ಮುಖ್ಯವಾಗುತ್ತದೆ.
ಮೀನು ತಿನ್ನುವುದು ನಾಲಿಗೆ ರುಚಿಗಾಗಿ ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೀನಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಮ್, ತಾಮ್ರ ಮತ್ತು ಸತುವಿನಂತಹ ಖನಿಜಗಳು ಸಮೃದ್ಧವಾಗಿವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಮೀನಿನಲ್ಲಿರುವ ಕೊಬ್ಬುಗಳು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ನಿಮಗೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರು ಬೇಕಾದರೂ ತಿನ್ನಬಹುದು. ಮೀನಿನಲ್ಲಿರುವ ಕೊಬ್ಬು ನಮ್ಮ ದೇಹದಲ್ಲಿನ ರಕ್ತದೊತ್ತಡದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳಾದ DHA ಮತ್ತು EPA ಕಣ್ಣುಗಳಿಗೆ ಒಳ್ಳೆಯದು. ಇದು ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ
ಅದರಲ್ಲೂ ಇದು ಅಸ್ತಮಾ ಕಾಯಿಲೆಯಿಂದ ಮುಕ್ತಿ ಪಡೆಯಲು ಬಹಳ ಪ್ರಯೋಜನಕಾರಿಯಾಗಿದೆ. ಅಸ್ತಮಾ ತಡೆಗಟ್ಟಲು ಸಂಶೋಧನೆ ನಡೆಸಲಾಗಿದ್ದು, ಸಂಶೋಧಕರು 642 ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಮೀನು ಸೇವನೆಯಿಂದ ಅಸ್ತಮಾವನ್ನು ತಪ್ಪಿಸಬಹುದು ಎಂಬುದಾಗಿ ಮಾಹಿತಿ ಕಂಡುಕೊಂಡಿದ್ದಾರೆ. ಮೀನಿನಲ್ಲಿ ಎನ್ 3 ತೈಲವಿದ್ದು, ಇದು ಅಸ್ತಮಾ ಅಪಾಯವನ್ನು ಶೇ.62ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಮತ್ತೊಂದು ಅಧ್ಯಯನದ ಪ್ರಕಾರ, ಸಾಲ್ಮನ್ , ಟ್ರೌಟ್, ಮತ್ತು ಸಾರ್ಡೀನ್ ಗಳಂತಹ ಮೀನುಗಳಲ್ಲಿ ಎನ್ 3 ತೈಲವು ಅಧಿಕವಾಗಿದೆ. ಇದು ಮಕ್ಕಳಲ್ಲಿ ಅಸ್ತಮಾ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ತಿಳಿದುಬಂದಿದೆ. ಈ ಮೀನುಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಿದಾಗ ಅವರ ಶ್ವಾಸಕೋಶದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿರುವುದಾಗಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ ಇನ್ನಷ್ಟು ಆರೋಗ್ಯ ಪ್ರಯೋಜನವನ್ನೂ ನೀಡುವ ಮೀನಿನ ಪ್ರಯೋಜನಗಳು ಇಲ್ಲಿ ತಿಳಿಸಿದ್ದೇವೆ ನೋಡಿ.
ಹೃದಯದ ಆರೋಗ್ಯ ಕಾಪಾಡುತ್ತದೆ :
ಮೀನಿನಲ್ಲಿ ಇರುವ ಒಮೆಗಾ 3 ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಒಳ್ಳೆಯ ಕೊಬ್ಬಿನಂಶವನ್ನು ಹೆಚ್ಚು ಮಾಡುತ್ತದೆ. ಮೀನಿನ ಎಣ್ಣೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ದೇಹದಲ್ಲಿ ರಕ್ತ ಸಂಚಲನಕ್ಕೆ ಸಹಾಯಮಾಡುವುದು. ಸಾಲಾಮೋನ್ ಮೀನು ಮತ್ತು ನಿಯಮಿತವಾದ ವ್ಯಾಯಾಮ ಮಾಡಿದರೆ ಬೇಗನೆ ತೂಕ ಕಡಿಮೆಯಾಗುವುದು.
ಕ್ಯಾನ್ಸರ್:
ಸ್ತನ, ಕೊಲೊನ್, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಳು 30-50% ರಷ್ಟು ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಮಧುಮೇಹ:
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮೀನು ಎಣ್ಣೆ ಸಹಾಯ ಮಾಡುತ್ತದೆ. ಅಲ್ಲದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಉರಿಯೂತದ ಪರಿಸ್ಥಿತಿಗಳು:
ಕೊಬ್ಬಿನ ಆಮ್ಲ ಮೀನು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಸಂಧಿವಾತ, ಸೋರಿಯಾಸಿಸ್ (ಚರ್ಮದ ಸ್ಥಿತಿ), ಮತ್ತು ಸ್ವಯಂ ಇಮ್ಯೂನ್ ರೋಗಗಳಂತಹ ವಿವಿಧ ಉರಿಯೂತದ ಪರಿಸ್ಥಿತಿಗಳಿಗೆ ಸಹಾಯ ಮಾಡಬಹುದು.
ಉತ್ತಮ ಚರ್ಮ ಮತ್ತು ಕೂದಲು:
ಮೀನು ಸೇವನೆಯಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು ಹೊಳಪು ನೀಡುತ್ತದೆ.
ಸ್ಮರಣಶಕ್ತಿ ವೃದ್ಧಿ:
ಸಾಲ್ಮನ್ ಅಥವಾ ಟ್ಯೂನ ಮೀನುಗಳ ಸೇವನೆಯಿಂದ ಮಿದುಳಿನ ಬೆಳವಣಿಗೆಯಾಗಿ ಸ್ಮರಣಶಕ್ತಿ ವೃದ್ಧಿಗೆ ಸಹಕಾರಿ. ಇದು ಮಕ್ಕಳಿಗೆ ಬಹಳ ಉಪಯುಕ್ತ.
ದೃಷ್ಟಿ ವೃದ್ಧಿ:
ಒಮೆಗಾ 3 ಆಮ್ಲಗಳು ರೆಟಿನಾದ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ನಿಮ್ಮ ದೃಷ್ಟಿಶಕ್ತಿ ವೃದ್ಧಿಗೆ ಮೀನಿನ ಸೇವನೆ ಸಹಕಾರಿ. ಅಲ್ಲದೆ, ಬಾಣಂತಿಯರು ಮೀನು ತಿನ್ನುವುದರಿಂದ ಎದೆಹಾಲು ಕುಡಿಯುವ ಶಿಶುಗಳು ಉತ್ತಮ ದೃಷ್ಟಿ ಹೊಂಡಲು ಉಪಕಾರಿ.
ಖಿನ್ನತೆಯಿಂದ ಹೊರಬರಲು:
ಮೀನು ಸೇವನೆಯು ಖಿನ್ನತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪ್ರಸವದ ನಂತರದ ಖಿನ್ನತೆಯಿಂದ ಬಳಲುವ ಮಹಿಳೆಯರಿಗೆ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.
ವೀರ್ಯ ವೃದ್ಧಿಗೆ:
ಬಲವಾದ ವೀರ್ಯ ಉತ್ಪಾದನೆಯು ನಮ್ಮ ಆಹಾರಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ತಮ್ಮ ದೈನಂದಿನ ಆಹಾರ ಪದ್ಧತಿಗಳಲ್ಲಿ ಮೀನು ಸೇವಿಸುವ ಪುರುಷರು ಉತ್ತಮ ಗುಣಮಟ್ಟದ ವೀರ್ಯವನ್ನು ಹೊಂದಿರುತ್ತಾರೆ.