ಬೆಳ್ತಂಗಡಿಯ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗೆ ಬ್ಲಾಕ್ ಮೇಲ್ – ಪೆಟ್ರೋಲ್ ಬಂಕ್ ನಲ್ಲಿ ದುಡಿದು ಬ್ಲಾಕ್ ಮೇಲರ್ ಗೆ ಹಣ ಕೊಡಲು ವಿಫಲ ಯತ್ನ, ಕೊನೆಗೆ ಆತ್ಮಹತ್ಯೆ !
ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿ ಒಬ್ಬನ ಮೇಲೆ ಬ್ಲಾಕ್ ಮೇಲ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೋರ್ವ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಒಡ್ಡಿದ್ದು, ಈ ಹಿನ್ನೆಲೆ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಇದೀಗ ಆ ನತದೃಷ್ಟ ಬಾಲಕ ತೀರಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಲ್ಲದೆ, ಲಕ್ಷಾಂತರ ಹಣ ನೀಡುವಂತೆ ಪೀಡಿಸಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಅಶೋಕ ನಗರ ಎಂಬಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಸ್ಥಳೀಯ ಪ್ರತಿಷ್ಟಿತ ಖಾಸಗಿ ಕಾಲೇಜಿನ ಹರ್ಷಿತ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಇಬ್ಬರ ನಡುವೆ ಮೆಸೇಜ್, ಮಾತುಕತೆ ನಡೆದಿದೆ. ಇದಾದ ಬಳಿಕ ಇಬ್ಬರೂ ನಡುವೆ ಸಲುಗೆ ಬೆಳೆದಿದ್ದು, ಆತ್ಮೀಯ ಸ್ನೇಹಿತರಂತೆ ಆಗಿಬಿಟ್ಟಿದ್ದಾರೆ. ಈ ಮಧ್ಯೆ ಅವರ ಮಧ್ಯೆ ವಿಡಿಯೋ ಚಾಟ್ ಕೂಡ ನಡೆಯುತ್ತಿತ್ತು. ಆದರೆ ಇದನ್ನೇ ದಾಳವಾಗಿ ಇರಿಸಿಕೊಂಡ ವ್ಯಕ್ತಿ ವಿದ್ಯಾರ್ಥಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡಲು ಒಪ್ಪದಾಗ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಆತನ ಆಕಸ್ಮಿಕ ಬೆದರಿಕೆಗೆ ಯುವಕ ಬೆಚ್ಚಿಬಿದ್ದಿದ್ದಾನೆ. ಅದಕ್ಕಾಗಿ ಹಣ ಹೊಂಚಲು ಶುರುಮಾಡಿದ್ದಾನೆ. ಕಾಲೇಜಿಗೆ ಹೋಗುತ್ತಿದ್ದ ಆತ ಇದೇ ಒತ್ತಡದಲ್ಲಿ ಸರಿಯಾಗಿ ಹೋಗಲು ಆಗಿಲ್ಲ. ಅಲ್ಲದೇ ಬ್ಲಾಕ್ ಮೇಲ್ ಮಾಡುವವನ ಒತ್ತಡ ಭರಿಸಲು ಆಗದೆ ದುಡ್ಡು ಹೊಂದಿಸಲು ಆತ ಸ್ಥಳೀಯ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಅಲ್ಲಿಂದ ಒಂದಷ್ಟು ದುಡ್ಡು ದುಡಿದು ಕೊಟ್ಟಿದ್ದಾನೆ. ಇನ್ನಷ್ಟು ದುಡ್ಡಿಗಾಗಿ ಬೇಡಿಕೆ ಬಂದ ಕಾರಣ ಮತ್ತು ಅದನ್ನು ಹೊಂದಿಸಲು ಆಗದ ಕಾರಣ ಆತ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾನೆ.
ಇದರಿಂದ ಏನೂ ಮಾಡಲು ತೋಚದೆ, ಆತ ಕೇಳಿದಷ್ಟು ಹಣ ಹೊಂದಿಸಲು ಸಾಧ್ಯವಾಗದೆ ವಿದ್ಯಾರ್ಥಿ ಭಯಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಎರಡು ದಿನಗಳ ಹಿಂದೆ ನಡೆದಿದ್ದು ಇದೀಗ ಚಿಕಿತ್ಸೆ ಫಲಿಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಹುಡುಗನನ್ನು ಬಲ್ಲವರ ಪ್ರಕಾರ, ಆತ ತೀರಾ ಸೈಲೆಂಟ್ ಆಗಿದ್ದು ತನ್ನ ಪಾಡಿಗೆ ತಾನು ಇರುವ ಒಳ್ಳೆಯ ಹುಡುಗ ಎನ್ನುವ ಅಭಿಪ್ರಾಯ ಇದೆ.