ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡ್ತಿದ್ದ 17ರ ಹುಡುಗನನ್ನು, ಆತನ ತಂದೆಯೇ ತಂದು ಪೋಲಿಸರಿಗೆ ಒಪ್ಪಿಸಿದ!!
ಹರಯದ ಪ್ರಾಯವೇ ಹಾಗೆ. ಹೆಚ್ಚು ಆಕರ್ಷಣೆಗಳಿಂದ ಕೂಡಿರುತ್ತದೆ. ಈ ಸಮಯದಲ್ಲಿ ಹುಡುಗರು ಹುಡುಗಿಯರನ್ನು ರೇಗಿಸುವುದು, ಚುಡಾಯಿಸುವುದು ಸರ್ವೇ ಸಾಮಾನ್ಯ. ಆದರಿದು ತಮಾಷೆಯಾಗಿದ್ದು, ಎಲ್ಲವೂ ಮಿತಿಯಲ್ಲಿರಬೇಕು. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳಿಂದ ಕೆಲವು ಹುಡುಗರಲ್ಲಿದು ಅತಿಯಾಗೇ ಪರಿಣಮಿಸಿದೆ ಎನ್ನಬಹುದು. ಫೇಸ್ ಬುಕ್, ಇನ್ ಸ್ಟಾಗ್ರಾಂಗಳ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳೋದು, ಹೆಚ್ಚಾಗಿ ಮುಂದುವರಿಯೋದು, ಮತ್ತೆ ಅದರಲ್ಲಿ ಬೇಡದ ಕೆಲಸಗಳನ್ನು ಮಾಡಿ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡೋದು. ಇದೀಗ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು 17ರ ಹುಡುಗ ಅನೇಕ ಹುಡುಗಿಯರಿಗೆ ಬ್ಲಾಕ್ ಮೇಲ್ ಶುರುಮಾಡಿದ್ದಾನೆ. ಕೊನೆಗೆ ಆತನ ತಂದೆಯೇ ಅವನನ್ನು ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಹೌದು, 17 ವರ್ಷದ ಈ ಬಾಲಕ ಇನ್ಸ್ಟಾಗ್ರಾಮ್ ಮೂಲಕ ಅನೇಕ ಹುಡುಗಿಯರ ಸ್ನೇಹ ಬೆಳೆಸಿ, ಅವರನ್ನು ತುಂಬಾ ಹತ್ತಿರ ಮಾಡಿಕೊಂಡಿದ್ದಾನೆ. ನಂತರ ಅವರ ಖಾಸಗಿ ಫೋಟೋಗಳನ್ನು ಕೇಳಿ ಪಡೆದಿದ್ದಾನೆ. ಹುಡುಗಿಯರು ಕೂಡ ಹಿಂದೆ ಮುಂದೆ ಯೋಚಿಸದೆ ಕೇಳಿದ ಕೂಡಲೆ ಕಳಿಸಿದ್ದಾರೆ. ಆದರೆ ಈ ಪಾಪಿ ಆ ಎಲ್ಲಾ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಹುಡುಗಿಯರಿಗೆ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ.
ಈ ಹುಡುಗಿಯರಲ್ಲಿ 14 ವರ್ಷಗಳ ಬಾಲಕಿಗೆ ಹೆಚ್ಚು ಮಾನಸಿಕ ಹಿಂಸೆಯಾಗಿದ್ದು, ಆಕೆ ಕೊನೆಗೆ ಈತನ ಕಿರಿಕಿರಿ ತಾಳಲಾರದೆ ತಾನು ಫೋಟೋ, ವಿಡಿಯೋ ಕಳಿಸಿ ಮಾಡಿದ ಅಪರಾಧಗಳನ್ನೆಲ್ಲ ತಂದೆಯ ಬಳಿ ಹೇಳಿಕೊಂಡಿದ್ದಾಳೆ. ನಂತರ ಬಾಲಕಿಯ ತಂದೆ ದೆಹಲಿಯ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಮ್ ಪ್ರೊಫೈಲ್ ವಿವರಗಳನ್ನು ಪಡೆದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ನಂತರ ಆರೋಪಿಯ ಗುರುತು ಪತ್ತೆ ಹಚ್ಚಲು ಐಪಿ ವಿಳಾಸ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದಾರೆ. ಆರೋಪಿಯನ್ನು ಗುರುತಿಸಿದ ನಂತರ ಪೊಲೀಸರು ಆತನ ಮನೆಗೆ ಹೋಗಿದ್ದರು. ಅಷ್ಟರಲ್ಲಿ ಹುಡುಗ ಮನೆಯಿಂದ ಎಸ್ಕೇಪ್ ಆಗಿದ್ದ. ಬಳಿಕ ಪೊಲೀಸರು ನಡೆದ ವಿಚಾರಗಳನ್ನೆಲ್ಲ ಆತನ ತಂದೆಗೆ ತಿಳಿಸಿ, ತಮ್ಮ ಮಗ ಎಂತವನು ಎಂದು ಮನದಟ್ಟು ಮಾಡಿಕೊಟ್ಟಿದ್ದರು. ಅಲ್ಲದೆ ತಮ್ಮ ಮಗನನ್ನು ಠಾಣೆಗೆ ಹಾಜರುಪಡಿಸುವಂತೆ ಸೂಚಿಸಿದ್ದರು. ನಂತರ ಎಲ್ಲ ತಣ್ಣಗಾದ ಮೇಲೆ, ಏನೂ ಗೊತ್ತಿಲ್ಲದವನಂತೆ ಮಗ ಮನೆಗೆ ಬಂದಿದ್ದಾನೆ. ಆತ ಬರುತ್ತಿದ್ದಂತೆ ತಂದೆಯೇ ಆತನನ್ನು ಹಿಡಿದು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ.