ATM ಸೆಕ್ಯುರಿಟಿ ಗಾರ್ಡ್ ನಿಂದ ಹಣ ಡ್ರಾ ಮಾಡಿಸ್ತಿದ್ದ ವೃದ್ಧ! ಕ್ಯಾಶ್ ಡ್ರಾ ಮಾಡಿ ಮಾಡಿಯೇ ಆತ ದೋಚಿದ್ದು ಬರೋಬ್ಬರಿ 2.50 ಲಕ್ಷ!!
ಹೆಚ್ಚಿನವರು ಹಣವನ್ನು ಡ್ರಾ ಮಾಡಲು ATM ಅನ್ನೇ ಬಳಸುತ್ತಾರೆ. ಬ್ಯಾಂಕುಗಳನ್ನು ಬಿಟ್ಟು, ಸುಲಭವಾಗಿ ಹಣ ತೆಗೆಯುವ ಈ ವಿಧಾನವನ್ನೇ ಎಲ್ಲರೂ ಅವಲಂಭಿಸಿದ್ದಾರೆ. ಇನ್ನು ಈ ATMಗಳಿಗೆ ಹಣ ತೆಗೆಯಲು ಬರುವ ಅನೇಕರಿಗೆ ಅದನ್ನು ಬಳಸುವ ವಿಧಾನ ತಿಳಿದಿರುವುದಿಲ್ಲ. ಅಂತಹ ಸಮಯದಲ್ಲಿ, ಹಣ ತೆಗೆಯಲು ಬಂದ ಮತ್ತೊಬ್ಬರ ಮೂಲಕ, ಪಿನ್ ನಂಬರ್ ಎಲ್ಲವನ್ನೂ ಹೇಳಿ ಡ್ರಾ ಮಾಡಿಸುತ್ತಾರೆ. ಯಾರೂ ಇಲ್ಲದಾಗ ಸೆಕ್ಯುರಿಟಿ ಗಾರ್ಡ್ ಡ್ರಾ ಮಾಡಿಕೊಡುತ್ತಾನೆ. ಇಲ್ಲೊಂದು ATM ನಲ್ಲೂ ಹೀಗೆ ಆಗಿದ್ದು, ಹಣ ವಿತ್ ಡ್ರಾ ಮಾಡಲು ಬರುತ್ತಿದ್ದ ವೃದ್ಧರೊಬ್ಬರಿಗೆ ಸೆಕ್ಯೂರಿಟಿ ಗಾರ್ಡ್ ಹಣ ಬಿಡಿಸಿ ಕೊಟ್ಟಿದ್ದಾನೆ. ಬಳಿಕ ವೃದ್ಧನನ್ನು ವಂಚಿಸಿ ಲಕ್ಷ, ಲಕ್ಷ ರೂಪಾಯಿಗಳನ್ನು ದೋಚಿದ್ದಾನೆ.!
ಬೆಂಗಳೂರಿನ ಪೀಣ್ಯದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕರಂಗಯ್ಯ ಎಂಬುವವರು ಸೆಕ್ಯುರಿಟಿ ಗಾರ್ಡ್ ನಿಂದ ವಂಚನೆಗೊಳಗಾಗಿದ್ದಾರೆ. ಚಿಕ್ಕರಂಗಯ್ಯ ಕಳೆದ ವರ್ಷ ಖಾಸಗಿ ಕಂಪನಿಯಿಂದ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಜುಟಿ ಪಂಡ್ ಅಂತಾ ಬಂದ ಹಣದಲ್ಲಿ ಹೇಗೋ ಜೀವನ ಸಾಗಿಸಬಹುದು ಅಂತಾ ಇದ್ದ ಇವರಿಗೆ ಮನೆ ಬಳಿಯ ಎಟಿಎಂ ಸೆಕ್ಯೂರಿಟಿ ಗಾರ್ಡ್ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಅನಕ್ಷರಸ್ಥರಾಗಿರೋ ಚಿಕ್ಕರಂಗಯ್ಯಗೆ ಎಟಿಎಂನಿಂದ ಹಣ ಡ್ರಾ ಮಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಹಣ ಡ್ರಾ ಮಾಡಿಕೊಡುವಂತೆ ತಮ್ಮ ಮನೆಯ ಬಳಿಯೇ ಇರುವ ಎಂಟಿಎಂನ ಸೆಕ್ಯೂರಿಟಿ ಗಾರ್ಡ್‍ಗೆ ಹೇಳುತ್ತಿದ್ದರು. ಹೀಗೆ ಇವರು ಎಂಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗಲೆಲ್ಲಾ ಸೆಕ್ಯೂರಿಟಿ ಗಾರ್ಡ್ ಹಣ ಡ್ರಾ ಮಾಡಿ ಕೊಟ್ಟು ಚಿಕ್ಕರಂಗಯ್ಯಗೆ ಗೊತ್ತಾಗದಂತೆ ಬರೋಬ್ಬರಿ 2.50 ಲಕ್ಷದಷ್ಟು ರೂ. ಖಾತೆಯಿಂದ ಎಗರಿಸಿದ್ದಾನೆ.
ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಸಂದರ್ಭ ಚಿಕ್ಕರಂಗಯ್ಯಗೆ ತನ್ನ ಖಾತೆಯಿಂದ ಇಷ್ಟೊಂದು ಹಣ ಡ್ರಾ ಆಗಿದೆ ಅನ್ನೋದು ಗೊತ್ತಾಗಿದೆ. ಸೆಕ್ಯುರಿಟಿ ಗಾರ್ಡ್ ತನಗೆ ಸರಿಯಾಗಿ ಟೋಪಿ ಹಾಕಿದ್ದಾನೆ ಎನ್ನುವುದು ಗೊತ್ತಾಗಿದೆ. ಕೂಡಲೇ ಯಶವಂತಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ 4 ತಿಂಗಳು ಆದ್ರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಚಿಕ್ಕರಂಗಯ್ಯನಿಗೆ ಠಾಣೆಗೆ ಅಲಿದಾಡಿ ಸಾಕಾಗಿ ಹೋಗಿದೆ. ಕೊನೆಗೆ ನನ್ನ ಹಣ ಹಿಂತಿರುಗಿಸಿ ಕೊಡಿ ಎಂದು ಕಣ್ಣೀರಿಡುತ್ತಾ ಪೋಲೀಸರನ್ನು ಪರಿಪರಿಯಾಗಿ ಬೇಡುತ್ತಿದ್ದಾರೆ.