ಸರ್ಕಾರದ ಬೊಕ್ಕಸಕ್ಕೆ ಕುತ್ತು ತಂದಿತು ಆ 5 ನಿಮಿಷದ ವಿಡಿಯೋ! ಸಣ್ಣ ವಿಡಿಯೋಗಾಗಿ 4.5 ಕೋಟಿ ವ್ಯಯಿಸಿದ ಕರ್ನಾಟಕ ಸರ್ಕಾರ!!

ಕರ್ನಾಟಕ ಸರ್ಕಾರವು ಕೇವಲ 5 ನಿಮಿಷದ ವಿಡಿಯೋಗಾಗಿ ಸುಮಾರು 4.5 ಕೋಟಿಯಷ್ಟು ಹಣವನ್ನು ಸ್ಟುಡಿಯೋ ಒಂದಕ್ಕೆ ಪಾವತಿಸುವಂತಾಗಿದೆ. ಈ ವಿಚಾರವಾಗಿ ಇದೀಗ ಹೈಕೋರ್ಟ್ ತೀರ್ಪು ನೀಡಿದ್ದು ಸರ್ಕಾರದ ಬೊಕ್ಕಸದಿಂದ ಸುಮ್ಮನೆ ನಾಲ್ಕುವರೆ ಕೋಟಿ ವ್ಯರ್ಥವಾದಂತಾಗಿದೆ. ಏನಿದು ವಿಡಿಯೋ ವಿಚಾರ? ಹಾಗಾದ್ರೆ ಈ ಸ್ಟೋರಿ ನೋಡಿ

ಬಿಜೆಪಿ ಸರ್ಕಾರವು ಕಳೆದ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ (ಜಿಮ್‌)ವನ್ನು ಹಮ್ಮಿಕೊಂಡಿದ್ದು, ಅದರ ಪ್ರಚಾರಕ್ಕಾಗಿ ಐದು ನಿಮಿಷದ ‘3ಡಿ’ ವಿಡಿಯೋ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೋ ಕಂಪನಿಗೆ ಗುತ್ತಿಗೆ ನೀಡಿತ್ತು. ಆದರೆ ನಂತರದ ದಿನಗಳಲ್ಲಿ ಕಾರಣಾಂತರದಿಂದ ಈ ಗುತ್ತಿಗೆಯನ್ನು ಸರ್ಕಾರವು ಹಿಂಪಡೆದಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ, ಮುಂಬೈ ಮೂಲದ ಬಿಬಿಪಿ ಸ್ಟುಡಿಯೋ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಬಿಬಿಪಿ ಸ್ಟುಡಿಯೋ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಸರ್ಕಾರದ ಕ್ರಮವನ್ನು ರದ್ದುಪಡಿಸುವಂತೆ ಆದೇಶ ಮಾಡಿದೆ. ಜೊತೆಗೆ ಒಪ್ಪಂದದಂತೆ ಕಂಪನಿಗೆ 4.5 ಕೋಟಿ ರು. ಪಾವತಿಸಬೇಕು ಎಂದು ನಿರ್ದೇಶಿಸಿದೆ. ಅರ್ಜಿದಾರ ಕಂಪನಿ ಗುತ್ತಿಗೆ ಒಪ್ಪಂದದಂತೆ ವಿಡಿಯೋ ಚಿತ್ರೀಕರಣ ಪೂರ್ಣಗೊಳಿಸಿತ್ತು. ಅಂತಿಮ ವಿಡಿಯೋ ನೀಡುವುದಷ್ಟೇ ಬಾಕಿಯಿತ್ತು. ಅದಕ್ಕೂ ಮುನ್ನವೇ ಗುತ್ತಿಗೆ ಕಾರ್ಯಾದೇಶ ಹಿಂಪಡೆದ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಪ್ರಚಾರ ವಿಡಿಯೋದ ಗುಣಮಟ್ಟ ಪರಿಶೀಲಿಸದೆ ಕೇವಲ ರಾಜಕೀಯ ಹಸ್ತಕ್ಷೇಪದಿಂದ ಗುತ್ತಿಗೆ ಕಾರ್ಯಾದೇಶ ರದ್ದು ಮಾಡಿರುವುದು ನಿರಂಕುಶತ್ವಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈಗಾಗಲೇ ಮುಂಗಡವಾಗಿ 1.5 ಕೋಟಿ ರು. ನೀಡಿರುವುದರಿಂದ ಉಳಿದ ಬಾಕಿ ಮೊತ್ತವನ್ನು ಅರ್ಜಿದಾರ ಕಂಪನಿಗೆ ಪಾವತಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಇದೀಗ ಸರ್ಕಾರಕ್ಕೆ ಸುಮ್ಮನಿರಲಾರದೆ ಇರುವೆ ಬಿಟ್ಟಿಕೊಂಡತಾಗಿದೆ.

Leave A Reply

Your email address will not be published.