ಬ್ರಾಹ್ಮಣ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡಲು ಮುಂದಾದ ಸರ್ಕಾರ ! ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿತು ನಿರ್ಧಾರ!
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳೆಲ್ಲವೂ ಜನರನ್ನು ಸೆಳೆಯಲು ಭರ್ಜರಿ ಯೋಜನೆಗಳ ಘೋಷಣೆ ಮಾಡುತ್ತಿವೆ. ಆಡಳಿತ ರೂಢ ಬಿಜೆಪಿಯಂತೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಮತ ಬೇಟೆ ಶುರುಮಾಡಿದೆ. ಆದರಲ್ಲೂ ಕೂಡ ಸಮುದಾಯಗಳ ಓಲೈಕೆಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ ಎಂಬಂತೆ ಸಿಕ್ಕ ದಾರಿಗಳಲೆಲ್ಲ ಹಿಂದು ಮುಂದು ಯೋಚಿಸದೆ ಮುನ್ನುಗ್ಗುತ್ತಿದೆ. ಸದ್ಯ ಮಾಧ್ಯಮಗಳ ವಿಚಾರವಾಗಿ, ವಿವೇಚನೆ ಮಾಡದೆ ಸರ್ಕಾರ ತೆಗೆದುಕೊಂಡ ನಿರ್ಧಾರವೊಂದು ರಾಜ್ಯದ ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಹೌದು, ಇದನ್ನು ಸರ್ಕಾರದ ಉದ್ಧಟತನ ಎಂದೇ ಹೇಳಬಹುದು. ಸರ್ಕಾರದ ವಿವೇಚನಾ ರಹಿತ ಲೆಕ್ಕಾಚಾರದ ಫಲವಾಗಿ ವಾರ್ತಾ ಮತ್ತು ಸಂಪರ್ಕ ಇಲಾಖಾ ವತಿಯಿಂದ ಮೊದಲ ಬಾರಿಗೆ ಜಾತಿ ಆಧಾರಿತ ಜಾಹಿರಾತೊಂದು ಪ್ರಕಟವಾಗಿದೆ. ಬ್ರಾಹ್ಮಣ ಸಮುದಾಯ ಒಡೆತನದ ಎಲ್ಲಾ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟದ ಜಾಹಿರಾತು ನೀಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಆದೇಶಿಸಿದ್ದು, ಈ ಕುರಿತು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಈ ವಿಚಾರವೀಗ ಮಾಧ್ಯಮ ಲೋಕದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಪತ್ರಿಕೆಗಳ ಸಂಪಾದಕರು, ಮಾಲಿಕರು RNI ಪ್ರಮಾಣ ಪತ್ರ, ಘೋಷಣಾ ಪತ್ರ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, RNI ಗೆ ಸಲ್ಲಿಸಿರುವ ವಾರ್ಷಿಕ ವರದಿ, 5 ವರ್ಷಗಳ ಪತ್ರಿಕಾ ಪ್ರಕಟಣೆಯ ಹಾಜರಾತಿ ವರದಿ ಹಾಗೂ ಒಂದು ತಿಂಗಳ ಪತ್ರಿಕಾ ಸಂಚಿಕೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲಿದ್ದ ಮೈತ್ರಿ ಸರ್ಕಾರ ಕೂಡ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿದ್ದವು. ಸಾಮಾಜಿಕ ನ್ಯಾಯ ಮತ್ತು ಪತ್ರಿಕಾ ರಂಗವನ್ನು ಬಲಪಡಿಸುವ ಕಾರಣದಿಂದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮಾಲೀಕರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಪತ್ರಿಕೆಗಳು ಇದರ ಲಾಭ ಪಡೆಯುತ್ತಿದ್ದವು. ಆದರೆ ಈ ಜಾಹೀರಾತಿಗಾಗಿ ಸರ್ಕಾರವು, ಆಯಾ ಸಮುದಾಯಗಳಿಗೆ ಮೀಸಲಿಟ್ಟ ಹಣದಿಂದಲೇ ಸಣ್ಣ ಪ್ರಮಾಣದ ಹಣವನ್ನು ನೀಡುತ್ತಿತ್ತು. ಆದರೀಗ ಬಿಜೆಪಿ ಸರ್ಕಾರ ಮಾತ್ರ, ಎಲ್ಲಾ ರೀತಿಯ ಸಾಮಾಜಿಕ ಲೆಕ್ಕಾಚಾರವನ್ನು ಮೀರಿ ಜಾತಿ ಆಧಾರಿತದಲ್ಲಿ ಜಾಹೀರಾತು ನೀಡಲು ಮುಂದಾಗಿದ್ದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ.
ಸ್ವಲ್ಪವೂ ಆಲೋಚಿಸದೆ ಸರ್ಕಾರ ಹೊರಡಿಸಿದ ಈ ಆದೇಶಕ್ಕೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರದ ಈ ನಡೆ ವಿರುದ್ಧ ಹಿಂದುಳಿದ ಮತ್ತು ದಲಿತ ಪತ್ರಕರ್ತರ ಸಂಘದವರು ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ. ಅಲ್ಲದೆ ಜನವರಿ 30ರಂದು ಪ್ರತಿಭಟನೆ ನಡೆಸಲೂ ಮುಂದಾಗಿವೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿ ಸರ್ಕಾರದ ಈ ನಡೆ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.