Parrot Arrested in liquor mafia case :ಮದ್ಯಪಾನ ಮಾರಾಟ ಮಾಡಿದ “ಗಿಳಿ” | ಪೊಲೀಸರಿಂದ ಗಿಳಿ ಅರೆಸ್ಟ್, ಏನಿದು ಪ್ರಕರಣ?
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಈ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗದಿದ್ದರೂ, ಕೆಲವೊಂದು ಕಡೆಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಹಾಗೂ ಹೀಗೂ ಯಾರಾದರೂ ನಿಷೇಧದ ನಡುವೆಯೂ ಲಿಕ್ಕರ್ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದರೆ ಅಂತವರನ್ನು ಬಂಧಿಸಲಾಗುತ್ತದೆ. ಇದು ಕಾನೂನಿನ ನಿಯಮ. ಆದರೆ ಇದಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದೆ. ಈ ಲಿಕ್ಕರ್ ಮಾಫಿಯಾ ಪ್ರಕರಣದಲ್ಲಿ ಪೊಲೀಸರು ಗಿಳಿಯೊಂದನ್ನು ಈಗ ಪೊಲೀಸರು ಬಂಧಿಸಿದ್ದು, ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭ ಮಾಡಿದ್ದಾರೆ. ಆರೋಪಿಯ ಮುದ್ದಿನ ಗಿಳಿಯನ್ನು ವಿಚಾರಣೆಗೊಳಪಡಿಸಿ ಪ್ರಕರಣವನ್ನು ಭೇದಿಸಲು ಗಯಾ ಪೊಲೀಸರು ಇದನ್ನು ಬಂಧಿಸಿದ್ದಾರೆ.
ಈ ವಿಚಿತ್ರ ಘಟನೆ ಬಿಹಾರದ ಗುರುವಾ ಪೊಲೀಸ್ ಠಾಣೆಯ ಪಾಟ್ನಾದಲ್ಲಿ ನಡೆದಿದೆ. ಇಲ್ಲಿನ ಸಬ್ ಇನ್ಸ್‌ಪೆಕ್ಟರ್ ಕನ್ಹಯ್ಯ ಕುಮಾರ್ ಅವರಿಗೆ ಅಕ್ರಮ ಮದ್ಯ ಮಾರಾಟದ ಸುಳಿವು ದೊರಕಿದ್ದರಿಂದ ಮಂಗಳವಾರ ರಾತ್ರಿ ಅಮೃತ್ ಮಲ್ಲಾಹ್ ಮನೆ ಮೇಲೆ ಪೊಲೀಸರ ತಂಡ ದಾಳಿ ಮಾಡಿದೆ. ಆದರೆ ಹೇಗೋ ಪೊಲೀಸರು ಬರುವ ಮುನ್ಸೂಚನೆ ದೊರೆತ ಕಾರಣ ಆ ಮನೆಯ ಸದಸ್ಯರೆಲ್ಲರೂ ಪರಾರಿಯಾಗಿದ್ದರು. ಇವರಿಗೆ ಪೊಲೀಸರು ಬರುವ ಸುದ್ದಿಯನ್ನು ಈ ಗಿಳಿ ತಿಳಿಸಿದ್ದರಿಂದ ಅಮತ್ ಮಲ್ಲಾಹ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ಭಾವಿಸಿದ್ದಾರೆ.
ಹಾಗಾಗಿ ಎಸ್‌ಐ ಕನ್ಹಯ್ಯ ಕುಮಾರ್ ಪಂಜರದ ಸಮೇತ ಗಿಳಿಯನ್ನು ಹಿಡಿದು ಠಾಣೆಗೆ ತಂದಿದ್ದಾರೆ. ನಂತರ ಗಿಳಿಗೆ ಮಾಲೀಕನ ಬಗ್ಗೆ ಕೇಳಿದ್ದಾರೆ. ಹೇ ಗಿಳಿ, ಅಮೃತ್ ಮಲ್ಲಾಹ್ ಎಲ್ಲಿ ಹೋದ? ನಿಮ್ಮ ಯಜಮಾನ ಎಲ್ಲಿದ್ದಾರೆ ಅವರು ನಿನ್ನನ್ನು ಮನೆಗೆ ಏಕೆ ಒಂಟಿಯಾಗಿ ಬಿಟ್ಟರು? ಎಂದು ಎಸ್‌ಐ ಕನ್ಹಯ್ಯಾ ಕುಮಾರ್ ಪ್ರಶ್ನಿಸಿದರು. ತಕ್ಷಣ ಗಿಳಿ ‘ಕಟೋರೆ-ಕಟೋರೆ’ ಎಂದು ಕೂಗಿತು. ಮಾಲೀಕನ ಬಗ್ಗೆ ಕೇಳಿದರೆ, ಗಿಳಿ ಮೌನವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವುದರಿಂದ ಅಕ್ರಮ ಮದ್ಯ ಸಾಗಾಟ ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿರವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ರೀತಿ ಗಿಳಿ ಅರೆಸ್ಟ್ ಮಾಡಿರುವುದು ಎಷ್ಟು ಸರಿ ಎನ್ನುವುದು ಇನ್ನೂ ಕೂಡಾ ಪ್ರಶ್ನೆಯಾಗಿ ಉಳಿದಿದೆ.