ಪ್ರವೀಣ್ ನೆಟ್ಟಾರು ಹತ್ಯೆ : ಎನ್‌ಐಎ ಆರೋಪ ಪಟ್ಟಿಯಲ್ಲಿ ಬಹಿರಂಗಪಡಿಸಿದೆ ಆಘಾತಕಾರಿ ವಿಷಯ
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಎನ್‌ಐಎ ಆರೋಪ ಪಟ್ಟಿಯನ್ನು ಬಹಿರಂಗಪಡಿಸಿದೆ. ಮಸೂದ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪಿಎಫ್‌ಐ ಈ ಹತ್ಯೆ ಯೋಜನೆ ಮಾಡಿತ್ತು. ಇದಕ್ಕಾಗಿ ಹಲವಾರು ದಿನಗಳಿಂದ ಪ್ಲ್ಯಾನ್ ಮಾಡಿ ನಾಲ್ವರನ್ನು ಟಾರ್ಗೆಟ್ ಮಾಡಲಾಗಿತ್ತು. ಕೊನೆಗೆ ಪ್ರವೀಣ್ ನೆಟ್ಟಾರು ಹತ್ಯೆಗೆ ಮುಂದಾಗಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಒಟ್ಟು 20 ಮಂದಿಯನ್ನು ಆರೋಪಿಗಳೆಂದು ಹೇಳಲಾಗಿದೆ.
ಕೊನೆ ಕ್ಷಣದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಆದೇಶ ನೀಡಿದ್ದು ಮುಸ್ತಫಾ ಪೈಚಾರ್ ಎಂದು ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯಿಂದ ಹೊರ ಬರುತ್ತಿದ್ದಾಗ ಪಿಎಫ್ ಐ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾರ್ವಜನಿಕರ ಎದುರೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ PFI, ತನ್ನ ಗುರಿಗಳನ್ನು ಸಾಧಿಸಲು ನಡೆಸಲು ರಹಸ್ಯ ತಂಡಗಳನ್ನು ರಚಿಸಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎನ್‌ಐಎ ಹಂತಕರ ಎಲ್ಲಾ ಚಲನವಲನಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಪ್ರವೀಣ್ ನೆಟ್ಟಾರು ಮೇಲೆ 30 ಬಾರಿ ದಾಳಿ ನಡೆಸಲಾಗಿದ್ದು, ಆತನ ದೇಹದ ಮೇಲೆ ಆಯುಧದ ಗುರುತುಗಳು ಪತ್ತೆಯಾಗಿವೆ.
ಪ್ರವೀಣ್ ನೆಟ್ಟಾರು ಅವರಿಗೆ ಕೊಲೆ ಯೋಜನೆ ಬಗ್ಗೆ ಮೊದಲೇ ಸೂಚನೆ ದೊರಕಿತ್ತು. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಸ್ನೇಹಿತ ಚರಣ್ ರಾಜ್ ಅವರಿಗೂ ಹೇಳಿದ್ದಾಗಿಯೂ, ರಕ್ಷಣೆ ಮತ್ತು ಭದ್ರತೆಗಾಗಿ ತಮ್ಮ ಅಂಗಡಿಯ ಮುಂದೆ ಸಿಸಿಟಿವಿ ಅಳವಡಿಸುವಂತೆಯೂ ಕೇಳಿಕೊಂಡಿದ್ದರು. ಪ್ರವೀಣ್ ತನ್ನ ಸ್ನೇಹಿತನೊಂದಿಗೆ ಮಾತನಾಡಿರುವ ಆಡಿಯೋವನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.